ಉದಯವಾಹಿನಿ, ಎಳ್ಳಮಾವಾಸ್ಯೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಫೇಮಸ್ ಹಬ್ಬ. ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಎಳ್ಳಮಾವಾಸ್ಯೆ ದಿನ ರೈತಾಪಿ ವರ್ಗ ಭೂ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಸಿಹಿ ಖಾದ್ಯಗಳನ್ನ ಸಿದ್ಧಪಡಿಸಿಕೊಂಡು ಹೊಲಕ್ಕೆ ಹೋಗಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನಮಿಸುತ್ತಾರೆ. ಎಳ್ಳಮಾವಾಸ್ಯೆ ಕೃಷಿಕರ ಬಹು ದೊಡ್ಡ ಹಬ್ಬ. ಎಲ್ಲೆಡೆ ಸಮೃದ್ಧ ವೃದ್ಧಿಸಲಿ ಎಂದು ಅನ್ನ ನೀಡುವ ಭೂ ಮಾತೆಗೆ ಪೂಜೆಸಲ್ಲಿಸಿ ನೈವೇದ್ಯ ರೂಪದಲ್ಲಿ ಚರಗ ಚೆಲ್ಲುವ ಹಬ್ಬ. ಆಧುನಿಕತೆಯ ಭರಾಟೆಯಲ್ಲಿಯೂ ಗ್ರಾಮೀಣ ಸೊಗಡಿನ ಹಬ್ಬಗಳು ಅನ್ನದಾತರು ಮರೆತಿಲ್ಲ. ಇತ್ತ ಯಾದಗಿರಿ ತಾಲೂಕಿನ ಹೆಡಗಿಮುದ್ರ ಗ್ರಾಮದಲ್ಲಿ ಎಳ್ಳಮಾವಾಸ್ಯೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

ವರ್ಷಕ್ಕೊಮ್ಮೆ ಬರುವ ಎಳ್ಳಮಾವಾಸ್ಯೆಯಂದು ಮಹಿಳೆಯರು ನಸುಕಿನ ಜಾವ ಎದ್ದು ನೈವೇದ್ಯಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಾರೆ. ವಿವಿಧ ಖಾದ್ಯಗಳನ್ನ ತಯಾರಿಸುತ್ತಾರೆ. ವಿಶೇಷವಾಗಿ ಹೊಳಿಗೆ, ಕಡಬು, ಭರ್ತಿ, ಬಜ್ಜಿ, ಪುಂಡೆ ಪಲ್ಲೆ, ಹಸಿ ಇರುಳ್ಳಿ ಚಟ್ನಿ ಸೇರಿದಂತೆ ನಾನಾ ರೀತಿಯ ತಿಂಡಿತಿನಿಸುಗಳನ್ನ ಸಿದ್ದಪಡಿಸುತ್ತಾರೆ. ಇತ್ತ ಮನೆಯ ಗಂಡು ಮಕ್ಕಳು ತಮ್ಮ ಎತ್ತು ಹಾಗೂ ಎತ್ತಿನ ಬಂಡಿಯನ್ನು ಸಿಂಗರಿಸುತ್ತಾರೆ.
ಕುಟುಂಬಸ್ಥರೆಲ್ಲಾ ಸೇರಿ ಬನ್ನಿ ಮರ ಹಾಗೂ ಭೂಮಿ ತಾಯಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ತಾವು ತಂದ ನೈವೆೇದ್ಯವನ್ನು ಅರ್ಪಿಸುತ್ತಾರೆ. ಐದು ಸಣ್ಣ ಕಲ್ಲಿನ ತುಕ್ಕಡಿಗಳನ್ನ ತಂದಿಟ್ಟು ಪಾಂಡವರು ಅಂತ ಭಾವಿಸಿ ವಿಶೇಷ ರೀತಿಯಲ್ಲಿ ಪೂಜೆಯನ್ನ ಸಲ್ಲಿಸುತ್ತಾರೆ. ಬಳಿಕ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ನೈವೇದ್ಯ ತಿನ್ನಿಸಲಾಗುತ್ತೆ. ಇದಾದ ಬಳಿಕವೇ ರೈತರು ನೈವೇದ್ಯವನ್ನ ಜಮೀನಿನಲ್ಲಿ ಬೆಳೆಗೆ ಚಲ್ಲುತ್ತಾರೆ ಅದಕ್ಕೆ ಚರಗ ಚೆಲ್ಲುವುದು ಅಂತ ಹೇಳಲಾಗುತ್ತೆ. ಚರಗ ಏಕೆ ಚೆಲ್ಲುತ್ತಾರೆ ಅಂದರೆ ಜಮೀನಿನಲ್ಲಿ ಬೆಳೆದ ಬೆಳೆ ಚೆನ್ನಾಗಿ ಫಲ ನೀಡಲಿ ಅಂತ ಭೂ ತಾಯಿಗೆ ಬೇಡಿಕೊಂಡು ಚರಗ ಚೆಲ್ಲಲಾಗುತ್ತೆ. ಚರಗ ಚೆಲ್ಲಿದ ಬಳಿಕ ಕುಟುಂಬಸ್ಥರೆಲ್ಲರು ಸೇರಿ ಒಂದೆಡೆ ಕುಳಿತುಕೊಂಡು ಊಟ ಸವಿಯುತ್ತಾರೆ. ವಿಶೇಷವಾಗಿ ಓದಲು ಅಥವಾ ಕೆಲಸ ಮಾಡಲು ದೂರದ ಊರುಗಳಿಗೆ ಹೋದವರು ಈ ಹಬ್ಬಕ್ಕೆ ತಪ್ಪದೆ ಹಾಜರಾಗುತ್ತಾರೆ. ಇತ್ತ ಗಡಿ ಜಿಲ್ಲೆ ಬೀದರ್​​ನಲ್ಲೂ ಎಳ್ಳಮಾವಾಸ್ಯೆ ಹಬ್ಬ ಸಡಗರ ಜೋರಾಗಿತ್ತು. ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಉಡಿ ತುಂಬಿದರು.

Leave a Reply

Your email address will not be published. Required fields are marked *

error: Content is protected !!