ಉದಯವಾಹಿನಿ, ಚಿಕ್ಕಣ್ಣ ನಾಯಕ ನಟರಾಗಿರುವ ಜೋಡೆತ್ತು ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಚಿತ್ರತಂಡ ಇದೀಗ ಶೂಟಿಂಗ್‌ಗೆ ಹೊರಡಲು ಸಜ್ಜಾಗಿದೆ. ಇಡೀ ಸಿನಿಮಾ ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಬಯಕೆಯಿಂದ, ಅದಕ್ಕಾಗಿ ಒಂದು ಗ್ರಾಮವನ್ನೇ ಸೆಟ್ನಲ್ಲಿ ನಿರ್ಮಿಸುತ್ತಿದೆ ‘ಜೋಡೆತ್ತು’ ತಂಡ. ಇದಕ್ಕಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಜನವರಿ 5ರಿಂದ ಚಿತ್ರೀಕರಣ ಶುರುವಾಗಲಿದೆ.
ಸೋಮಶೇಖರ್ (ಕಟ್ಟಿಗೇನಹಳ್ಳಿ) ನಿರ್ಮಾಣದ ಜೋಡೆತ್ತು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾವಿದು. ಚಿಕ್ಕಣ್ಣ ಜತೆಗೆ ತೆಲುಗಿನ ಸುನಿಲ್ ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರೊಟ್ಟಿಗೆ ಇನ್ನೂ ಅನೇಕ ಕಲಾವಿದರು ನಟಿಸಲಿದ್ದು, ಅದರ ಕುರಿತು ಸದ್ಯದಲ್ಲೇ ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹರಿಬಿಡಲಿದೆ.
ಅಧ್ಯಕ್ಷ, ರಾಬರ್ಟ್, ಕಾಟೇರ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ದಿ ಡೆವಿಲ್’ ಸಿನಿಮಾಕ್ಕೆ ಕ್ಯಾಮೆರಾಮನ್ ಆಗಿದ್ದ ಸುಧಾಕರ್ ಎಸ್ ರಾಜ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಜತೆಗೆ ಛಾಯಾಗ್ರಹಣ ಜವಾಬ್ದಾರಿಯೂ ಅವರೇ ನಿರ್ವಹಿಸುವ ಮೂಲಕ ‘ಜೋಡೆತ್ತು’ಗಳಿಗೆ ಕಣ್ಣಾಗಲಿದ್ದಾರೆ. ಇನ್ನು ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಐದು ಹಾಡುಗಳನ್ನು ಕಟ್ಟಿಕೊಡಲಿದ್ದಾರೆ. ಮಾಸ್ತಿ, ರಾಜಶೇಖರ್ ಹಾಗೂ ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಜೋಡೆತ್ತು ಸಿನಿಮಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ 2026ರಲ್ಲಿ ಸಿನಿಮಾ ತೆರೆಕಾಣಲಿದೆ. ‘ಈ ಸಿನಿಮಾದ ಕಥೆ 80ರ ದಶಕದ ಕಾಲಘಟ್ಟದಲ್ಲಿ ನಡೆಯುತ್ತದೆ. ನಿಜವಾದ ‘ಜೋಡೆತ್ತು’ ಯಾರೆಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ. ಇದು ನನ್ನ ಕೆರಿಯರ್‌ನಲ್ಲೇ ದೊಡ್ಡ ಬಜೆಟ್‌ನ ಸಿನಿಮಾ. ಹಳ್ಳಿಯಲ್ಲಿ ಶುರುವಾಗಿ ಹಳ್ಳಿಯಲ್ಲೇ ಮುಗಿಯುವ ಸಿನಿಮಾ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆಕ್ಷನ್ ಎಲ್ಲಾ ಅಂಶಗಳೂ ಕೂಡಿರುವ ಸಿನಿಮಾವಿದು ಎಂದರು ನಟ ಚಿಕ್ಕಣ್ಣ.

Leave a Reply

Your email address will not be published. Required fields are marked *

error: Content is protected !!