ಉದಯವಾಹಿನಿ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ 45 ಚಿತ್ರ ಇದೇ ಡಿಸೆಂಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಜೋರಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇತ್ತೀಚೆಗಷ್ಟೇ ನಮ್ಮ ಚಿತ್ರದ ಟ್ರೈಲರ್ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಡುಗಳಿಗೂ ಜನರು ಮನ ಸೋತ್ತಿದ್ದಾರೆ. ನಮ್ಮ ಚಿತ್ರಕ್ಕೆ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಲ್ಲರಿಗೂ ಧನ್ಯವಾದ. ನಾನು ಸಿನಿಮಾ ನೋಡಿದ್ದೇನೆ. ನಿರ್ಮಾಪಕನಾಗಿ ನನಗೆ ಬಹಳ ಸಂತೋಷವಾಗಿದೆ. ನಮ್ಮ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಚಿತ್ರ ಬಿಡುಗಡೆಯಾಗುತ್ತಿರುವ ಈ ಸಮಯದಲ್ಲಿ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ್ದ ಪ್ರತಿಯೊಬ್ಬರಿಗೂ ನನ್ಮ ಧನ್ಯವಾದ. ಶಿವರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ ಹೇಳಬೇಕು. ಅವರಿಗೆ ಆರೋಗ್ಯದ ಸಮಸ್ಯೆ ಇದ್ದರೂ ಚಿತ್ರಕ್ಕೆ ತೊಂದರೆ ಆಗಬಾರದೆಂದು ತಮ್ಮ ಕೆಲಸಗಳನ್ನು ಪೂರೈಸಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದರು. ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಸಹಕಾರ ಕೂಡ ಅಪಾರ. ಅರ್ಜುನ್ ಜನ್ಯ ಅವರು ಮೂರು ವರ್ಷಗಳಿಂದ ನಮ್ಮ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಅವರ ಶ್ರಮ ಸಾರ್ಥಕ ಆಗಿದೆ. ಇನ್ನೂ, ನಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಕೆ.ವಿ.ಎನ್ ಸಂಸ್ಥೆ ವಿತರಣೆ ಮಾಡುತ್ತಿದೆ. ತಮಿಳುನಾಡು, ಆಂದ್ರಪ್ರದೇಶ ಹಾಗೂ ಕೇರಳದಲ್ಲೂ ಜನಪ್ರಿಯ ಸಂಸ್ಥೆಗಳು ವಿತರಣೆ ಮಾಡುತ್ತಿದೆ.
