ಉದಯವಾಹಿನಿ, ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಂಕಿ ಪಟ್ಟಣದಲ್ಲಿ ನಡೆದ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಒಟ್ಟು 20 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಈ ಪೈಕಿ ಎರಡು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 18 ವಾರ್ಡ್‌ಗಳಿಗೆ ಡಿ. 21ರಂದು ಮತದಾನ ನಡೆದಿತ್ತು.
ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಮುನ್ನಡೆ ಸಾಧಿಸಿ ಅಧಿಕಾರ ಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿತ 6 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದ್ದು, ಅವಿರೋಧ ಆಯ್ಕೆ ಸೇರಿಸಿ ಒಟ್ಟು 8 ಸ್ಥಾನ ಪಡೆದಿದ್ದಾರೆ.
ಈ ಫಲಿತಾಂಶದಿಂದಾಗಿ ಸಚಿವ ಮಂಕಾಳು ವೈದ್ಯ ಅವರ ಪ್ರಭಾವಕ್ಕೆ ಮಂಕಿ ಪಟ್ಟಣದಲ್ಲಿ ಭಾರೀ ಹಿನ್ನೆಡೆ ಆಗಿರುವುದು ಸ್ಪಷ್ಟವಾಗಿದೆ.
2020ರಲ್ಲಿ ರಚನೆಯಾದ ಮಂಕಿ ಪಟ್ಟಣ ಪಂಚಾಯತ್‌ಗೆ ಮೊದಲ ಬಾರಿಗೆ ನಡೆದ ಚುನಾವಣೆ ನಡೆದಿತ್ತು. ಮೊದಲ ಚುನಾವಣೆಯಲ್ಲೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಂಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿದ್ದಾರೆ.
