ಉದಯವಾಹಿನಿ, ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಏಕದಿನ ಟೂರ್ನಿ ವಿಜಯ ಹಝಾರೆ ಈಗಾಗಲೇ ಆರಂಭವಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರು ಕಣಕ್ಕಿಳಿಯುವ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಆದರೆ, ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಮಾತ್ರ ಈ ಟೂರ್ನಿಯಿಂದ ದೂರ ಉಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಅನಿಲ್ ಪಟೇಲ್ ನೀಡಿರುವ ಮಾಹಿತಿಯ ಪ್ರಕಾರ, ಬಿಸಿಸಿಐನ ಸೂಚನೆಯ ಮೇರೆಗೆ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಕಾರಣದಿಂದಾಗಿ ಅವರು ಗುಜರಾತ್ ತಂಡದ ಆಯ್ಕೆಗೆ ಲಭ್ಯರಿಲ್ಲ. ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಬುಮ್ರಾ ಅವರಿಗೆ ಹೆಚ್ಚಿನ ಒತ್ತಡ ನೀಡಬಾರದು ಎಂಬುದು ಮಂಡಳಿಯ ಉದ್ದೇಶವಾಗಿದೆ.
ಜನವರಿ 11 ರಿಂದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ಸರಣಿಯಲ್ಲೂ ಬುಮ್ರಾ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೊದಲಿಗೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಬುಮ್ರಾಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಜನವರಿ 21 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯ ವೇಳೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಕಳೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ, ದೀರ್ಘಾವಧಿಯ ಪಂದ್ಯಗಳಿಂದಾಗಿ ದೈಹಿಕ ಬಳಲಿಕೆಗೆ ಒಳಗಾಗಿದ್ದರು.
ಮುಂಬರುವ ಟಿ20 ವಿಶ್ವಕಪ್ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ. ತಂಡದ ಪ್ರಧಾನ ವೇಗಿ ಟೂರ್ನಿಯ ವೇಳೆಗೆ ಸಂಪೂರ್ಣ ಫಿಟ್ ಆಗಿರಲಿ ಎಂಬ ಕಾರಣಕ್ಕೆ ಬಿಸಿಸಿಐ ‘ವರ್ಕ್ ಲೋಡ್ ಮ್ಯಾನೇಜ್‌ಮೆಂಟ್ ಅಡಿಯಲ್ಲಿ ಅವರಿಗೆ ವಿಶ್ರಾಂತಿ ನೀಡುತ್ತಿದೆ.
ಪ್ರಮುಖ ಸರಣಿಗಳಲ್ಲಿ ಮಾತ್ರ ಬುಮ್ರಾ ಸೇವೆಯನ್ನು ಬಳಸಿಕೊಳ್ಳಲು ಬಿಸಿಸಿಐ ಮಾಸ್ಟರ್ ಪ್ಲಾನ್ ರೂಪಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದ ಬುಮ್ರಾ, ಈಗ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮತ್ತೆ ಚೆಂಡಿನ ಮೂಲಕ ಮ್ಯಾಜಿಕ್ ಮಾಡಲು ಸಜ್ಜಾಗುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!