ಉದಯವಾಹಿನಿ, ಚಿಕ್ಕಮಗಳೂರು: ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ, ಎಲ್ಲರೂ ಸಮಾನರು ಎಂಬ ಮಾತನ್ನು ಬಣಕಲ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಸಾಬೀತುಪಡಿಸಿದ್ದಾರೆ.ಧಾರವಾಡದಿಂದ ಪೊಲೀಸ್ ಕುಟುಂಬವೊಂದು ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಪೊಲೀಸ್ ಸಿಬ್ಬಂದಿ ತಮ್ಮ ಸ್ವಂತ ಕಾರಿಗೆ ಪೊಲೀಸ್ ಬೋರ್ಡ್ ಅಳವಡಿಸಿಕೊಂಡಿದ್ದರು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಬಣಕಲ್ ಪಿಎಸ್‌ಐ ರೇಣುಕಾ ಅವರು ಈ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರಿನಲ್ಲಿದ್ದವರು ತಮ್ಮ ಇಲಾಖೆಯ ಗುರುತಿನ ಚೀಟಿ ತೋರಿಸಿದರೂ ಸಹ ಖಾಸಗಿ ಕಾರಿಗೆ ಪೊಲೀಸ್ ಬೋರ್ಡ್ ಬಳಸುವಂತಿಲ್ಲ. ಕಾನೂನು ಉಲ್ಲಂಘನೆಯಾಗಿದೆ ಎಂದು ಪಿಎಸ್‌ಐ ರೇಣುಕಾ ಅವರು ದಂಡ ವಿಧಿಸಿದ್ದಾರೆ. ತಕ್ಷಣವೇ ಕಾರಿನಲ್ಲಿದ್ದ ಪೊಲೀಸ್ ಬೋರ್ಡ್ ತೆಗೆಸಿದ ನಂತರವೇ ಪ್ರಯಾಣ ಮುಂದುವರಿಸಲು ಅನುವು ಮಾಡಿಕೊಟ್ಟಿದ್ದಾರೆ. ಇಲಾಖೆಯವರೇ ಆದರೂ ಯಾವುದೇ ಮುಲಾಜಿಲ್ಲದೆ ಕರ್ತವ್ಯ ನಿಷ್ಠೆ ತೋರಿದ ಪಿಎಸ್‌ಐ ರೇಣುಕಾ ಅವರ ಕಾರ್ಯವೈಖರಿಗೆ ಸ್ಥಳೀಯರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
