ಉದಯವಾಹಿನಿ, ಚೀನಾ: ಅರುಣಾಚಲ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕುಗಳು ಚೀನಾದ ‘ಮೂಲಭೂತ ಆಸಕ್ತಿಗಳು’ ಎಂದು ಉಲ್ಲೇಖಿಸಿದ್ದ ಅಮೆರಿಕದ ರಕ್ಷಣಾ ಇಲಾಖೆ ವರದಿಯನ್ನು ಚೀನಾ ತೀವ್ರವಾಗಿ ತಿರಸ್ಕರಿಸಿದೆ. ಈ ವರದಿಯು ವಾಸ್ತವಕ್ಕೆ ದೂರವಾಗಿದ್ದು, ತನ್ನ ಮಿಲಿಟರಿ ಪ್ರಾಬಲ್ಯವನ್ನು ಸಮರ್ಥಿಸಿಕೊಳ್ಳಲು ಅಮೆರಿಕ ಹೂಡಿರುವ ತಂತ್ರ ಎಂದು ಚೀನಾ ಟೀಕಿಸಿದೆ.
ಅಮೆರಿಕದ ಪೆಂಟಗನ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ “ಚೀನಾವು ಅರುಣಾಚಲ ಪ್ರದೇಶದ ಮೇಲಿನ ಹಕ್ಕನ್ನು ತೈವಾನ್‌ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. 2049ರ ವೇಳೆಗೆ ಚೀನಾದ ‘ಮಹಾನ್ ಪುನರುಜ್ಜಿವನ’ ಸಾಧಿಸಲು ಈ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು ಅದರ ಗುರಿಯಾಗಿದೆ. ಅಲ್ಲದೆ, ಪಾಕಿಸ್ತಾನದೊಂದಿಗೆ ಸೇರಿ ಚೀನಾ ಹೊಸ ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಮುಂದಾಗುತ್ತಿದೆ” ಎಂದು ಎಚ್ಚರಿಸಿತ್ತು.
ಈ ವರದಿಯ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ವಕ್ತಾರ ಲಿನ್ ಜಿಯಾನ್, “ಅಮೆರಿಕ ಪ್ರತಿವರ್ಷ ಇಂತಹ ವರದಿಗಳನ್ನು ಬಿಡುಗಡೆ ಮಾಡುವ ಮೂಲಕ ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯ ಬಿತ್ತುವ ಸಂಚು” ಎಂದು ಆರೋಪಿಸಿದ್ದಾರೆ.
ಅತ್ತ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಜಾಂಗ್ ಕ್ಸಿಯೋಗಾಂಗ್ ಮಾತನಾಡಿ, “ಚೀನಾದ ರಕ್ಷಣಾ ನೀತಿಯನ್ನು ಪೆಂಟಗನ್ ವರದಿ ದುರುದ್ದೇಶಪೂರ್ವಕವಾಗಿ ತಪ್ಪಾಗಿ ಚಿತ್ರಿಸಿದೆ. ನಮ್ಮ ಮಿಲಿಟರಿ ಬೆಳವಣಿಗೆಯ ಬಗ್ಗೆ ಆಧಾರರಹಿತ ಊಹೆಗಳನ್ನು ಮಾಡಲಾಗಿದೆ” ಎಂದು ಕಿಡಿಕಾರಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಅಮೆರಿಕದ ವಿರುದ್ಧ ಹರಿಹಾಯ್ದಿರುವ ಚೀನಾ, ಭಾರತದ ವಿಚಾರದಲ್ಲಿ ಮಾತ್ರ ಸೌಮ್ಯ ಮಾತುಗಳನ್ನಾಡಿದೆ. “ಬೀಜಿಂಗ್ ಮತ್ತು ನವದೆಹಲಿ ನಡುವಿನ ಸಂಬಂಧವನ್ನು ನಾವು ದೀರ್ಘಾವಧಿಯ ದೃಷ್ಟಿಕೋನದಿಂದ ನೋಡುತ್ತಿದ್ದೇವೆ. ಸಂವಹನ ಬಲಪಡಿಸಲು, ಪರಸ್ಪರ ನಂಬಿಕೆ ಹೆಚ್ಚಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ” ಎಂದು ಲಿನ್ ಜಿಯಾನ್ ತಿಳಿಸಿದ್ದಾರೆ.
