ಉದಯವಾಹಿನಿ, ಜೈಪುರ: ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 7 ವರ್ಷಗಳ ಬಳಿಕ ವಿಜಜ ಹಝಾರೆ ಟ್ರೋಫಿ ಟೂರ್ನಿಗೆಮರಳಿದ್ದ ಭಾರತ ಹಾಗೂ ಮುಂಬೈ ತಂಡದ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎರಡನೇ ಸುತ್ತಿನ ಪಂದ್ಯದಲ್ಲಿ ಖಾತೆ ತೆರೆಯದ ಗೋಲ್ಡನ್ ಡಕ್‌ಔಟ್ ಆದರು. ಶುಕ್ರವಾರ ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಲಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಪಂದ್ಯದ ಮೊಟ್ಟ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪೈನ್ ಲೆಗ್‌ನಲ್ಲಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಅಂದ ಹಾಗೆ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಔಟ್ ಮಾಡುವ ಮೂಲಕ ದೇವೇಂದ್ರ ಸಿಂಗ್ ಬೋರಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪಂದ್ಯದ ಮೊದಲನೇ ಓವರ್‌ನಲ್ಲಿ ಅದ್ಭುತವಾಗಿ ಬೌಲ್ ಮಾಡಿದ್ದ ದೇವೇಂದ್ರ ಸಿಂಗ್ ಬೋರಾ ಕೊನೆಯ ಎಸೆತದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಬುದ್ದುವಂತಿಕೆಯಿಂದ ಔಟ್ ಮಾಡಿದರು. ರೋಹಿತ್ ಶರ್ಮಾ ಪುಲ್ ಶಾಟ್‌ಗಳಲ್ಲಿ ಪ್ರವೀಣರಾಗಿದ್ದಾರೆ. ಆದರೆ, ಮೊದಲನೇ ಓವರ್‌ನ ಕೊನೆಯ ಎಸೆತವನ್ನು ದೇವೇಂದ್ರ ಸಿಂಗ್ ಬೋರಾ, ಬ್ಯಾಟ್ಸ್‌ಮನ್ ಬಾಡಿ ಲೈನ್ ಮೇಲೆ ಬೌನ್ಸರ್ ಹಾಕಿದರು. ಈ ವೇಳೆ ಹಿಟ್‌ಮ್ಯಾನ್ ಸಿಕ್ಸರ್ ಬಾರಿಸಲು ಪುಲ್ ಮಾಡಿದರು. ಆದರೆ, ಚೆಂಡು ಬ್ಯಾಟ್‌ಗೆ ಸರಿಯಾಗಿ ಸಿಗಲಿಲ್ಲ ಹಾಗೂ ಪೈನ್ ಲೆಗ್‌ನಲ್ಲಿ ನಿಂತಿದ್ದ ಜಗಮೋಹನ್ ನಾಗರಕೋಟಿ ಬೌಂಡರಿ ಲೈನ್ ಬಳಿ ಸುಲಭವಾಗಿ ಕ್ಯಾಚ್ ಪಡೆದರು. ಇದಾದ ಬಳಿಕ 20 ರನ್ ಗಳಿಸಿದ ಬಳಿಕ ಅಂಗ್‌ಕೃಷ್ ರಘುವಂಶಿ ಕೂಡ ಔಟ್ ಆದರು.
ದೇವೇಂದ್ರ ಸಿಂಗ್ ಬೋರಾ ಯಾರು?
ಉತ್ತರಾಖಂಡ ತಂಡದ ವೇಗದ ಬೌಲರ್ ದೇವೇಂದ್ರ ಸಿಂಗ್ ಬೋರಾ ಅವರ ಪಾಲಿಗೆ ಮುಂಬೈ ವಿರುದ್ಧದ ಪಂದ್ಯದ ಲಿಸ್ಟ್ ಎ ಕ್ರಿಕೆಟ್‌ನ ಮೂರನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಅವರು ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಮೊದಲನೇ ಸುತ್ತಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಬೌಲ್ ಮಾಡಿದ್ದ 8.3 ಓವರ್‌ಗಳಿಗೆ 44 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು 19.50ರ ಸರಾಸರಿ ಮತ್ತು 20.2ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
