ಉದಯವಾಹಿನಿ : ಚಳಿಗಾಲದ ಹಲವು ಸಮಸ್ಯೆಗಳಲ್ಲಿ ಕೂದಲಿನದ್ದೂ ಒಂದು. ಸಿಕ್ಕುಸಿಕ್ಕಾಗಿ, ಒಣಗಿ, ಹೊಟ್ಟಾಗಿ, ತುಂಡಾಗಿ, ಉದುರಿ, ಬೋಳಾಗುವುದನ್ನು ತಪ್ಪಿಸುವುದು ಚಳಿಗಾಲದಲ್ಲಿ ಹರ ಸಾಹಸ. ಚಳಿಗಾಲ ಮುಗಿಯುವಷ್ಟರಲ್ಲಿ ತಲೆಯಲ್ಲಿ ಕೂದಲೂ ಮುಗಿದುಹೋಗಬಹುದು ಎಂದು ಆತಂಕಪಡುವವರೂ ಇದ್ದಾರೆ. ಕೂದಲಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆ, ಶಾಂಪುಗಳು ಕೆಲಸ ಮಾಡದಿದ್ದಾಗ ಕೆಲವು ಸರಳ ಸೂತ್ರಗಳನ್ನು ಬಳಸಿ ನಾವೇ ಕೂದಲಿನ ಆರೈಕೆ ಮಾಡಿ ಕೊಳ್ಳಬಹುದು. ಅಂದಹಾಗೆ ಅಗಸೆ ಬೀಜ ಗೊತ್ತಲ್ಲವೇ? ಇದನ್ನು ಬಳಸಿ ಕೂದಲನ್ನು ಆರೋಗ್ಯಪೂರ್ಣವಾಗಿಸಲು ಸಾಧ್ಯವಿದೆ.
ಒಮೇಗಾ 3 ಕೊಬ್ಬಿನಾಮ್ಲ, ಪ್ರೊಟೀನ್, ವಿಟಮಿನ್ ಇ ಮತ್ತು ಹಲವು ಬಿ ವಿಟಮಿನ್‌ಗಳು ಹಾಗೂ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಗಸೆ ಬೀಜವನ್ನು ನಿತ್ಯದ ಅಡುಗೆಯಲ್ಲಿ ಉಪಯೋಗಿಸಬಹುದು. ಇದರಿಂದ ಇಡೀ ದೇಹದ ಸ್ವಾಸ್ಥ್ಯ ಹೆಚ್ಚುತ್ತದೆ. ಆದರೆ ಇದನ್ನು ನೇರವಾಗಿ ಕೂದಲಿಗೆ ಉಪಯೋಗಿಸಬಹುದೆ? ಕೂದಲು ಉದುರದಂತೆ ತಡೆಯಲು ಅಗಸೆ ಬೀಜ ಹೇಗೆ ನೆರವಾಗುತ್ತದೆ? ಇದರಿಂದ ಎಣ್ಣೆ ಮಾಡಬಹುದೆ? ಮುಂತಾದ ಹಲವು ಪ್ರಶ್ನೆಗಳು ಮನದಲ್ಲಿ ಬಂದೀತು. ಅವುಗಳಿಗೆಲ್ಲ
ಅಗಸೆ ಬೀಜವನ್ನು ಎಣ್ಣೆ ಮಾಡಿ ಕೂದಲಿಗೆ ಉಪಯೋಗಿಸಬಹುದು. ಇದನ್ನು ರುಬ್ಬಿ ಜೆಲ್‌ನಂತೆ ಮಾಡಿ ಹೇರ್‌ಪ್ಯಾಕ್‌ಗೆ ಬಳಸಬಹುದು. ಪುಡಿ ಮಾಡಿ, ಮೊಸರಿನಲ್ಲಿ ಕಲೆಸಿ ಕೂದಲಿಗೆ ಹಚ್ಚಬಹುದು. ಇದು ಎಣ್ಣೆ ಬೀಜವೇ ಆದ್ದರಿಂದ ಅಗಸೆ ಎಣ್ಣೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರ ಜೆಲ್‌ಗಳೂ ಲಭ್ಯವಿವೆ. ಸ್ವಲ್ಪ ಸಮಯ ಹೊಂದಿಸಿಕೊಂಡರೆ, ನಾವೇ ಮಾಡಿಕೊಳ್ಳುವುದು ಸಹ ಕಷ್ಟವಲ್ಲ. ಕೂದಲಿಗೆ ಅಗಸೆ ಬೀಜವನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ.
ತಲೆಯ ಚರ್ಮದಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುವ ಸಾಧ್ಯತೆ ಅಗಸೆಬೀಜಕ್ಕಿದೆ. ಕೂದಲ ಬುಡದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಿ, ಬುಡಕ್ಕೆ ಪೋಷಣೆ ಒದಗಿಸುತ್ತದೆ. ತಲೆಯ ಚರ್ಮದಲ್ಲಿರುವ ತೈಲ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ಪ್ರಚೋದಿಸಿ, ಅತಿಯಾಗಿ ಎಣ್ಣೆ ಜಿಡ್ಡಾಗದಂತೆ ತಡೆಯುತ್ತವೆ.
ಎಲ್ಲ ರೀತಿಯ ಕೂದಲುಗಳಿಗೂ ಅಗಸೆ ಬೀಜ ಉಪಯುಕ್ತ. ಒಣಗಿದ ಶುಷ್ಕ ಕೂದಲು, ಎಣ್ಣೆ ಜಿಡ್ಡಿನ ಎಣ್ಣೆ ಕೂದಲು, ನೇರ ವೇಣಿ, ಸುರುಳಿ ಕೇಶಗಳು- ಹೀಗೆ ಎಲ್ಲ ರೀತಿಯ ಕೂದಲುಗಳಿಗೂ ಇದು ಉಪಯುಕ್ತ. ಕೂದಲನ್ನು ನಯವಾಗಿಸಿ, ಹೊಳಪು ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ ಅಗಸೆ ಬೀಜ.
