ಉದಯವಾಹಿನಿ, ತುಮಕೂರು: ಹೊಸ ವರ್ಷಾಚರಣೆ ಹಿನ್ನೆಲೆ ತುಮಕೂರು ಜಿಲ್ಲೆಯ ಹಲವೆಡೆ ನಿಷೇಧಾಜ್ಞೆ ಹಾಕಲಾಗಿದೆ. ದೇವರಾಯನದುರ್ಗ, ನಾಮದ ಚಿಲುಮೆ ಹಾಗೂ ಮಂದಾರಗಿರಿ ಬೆಟ್ಟದಲ್ಲಿ 144 ಸೆಕ್ಸನ್ ಜಾರಿಮಾಡಲಾಗಿದೆ. ಡಿ.31ರ ಸಂಜೆ 6ರಿಂದ ಜ.1ರ ಬೆಳಗ್ಗೆ 8 ಗಂಟೆ ಹಾಗೂ ಜನವರಿ 1ರ ಸಂಜೆ 6ರಿಂದ ಜನವರಿ 2ರ ಬೆಳಗ್ಗೆ 8ರವರೆಗೆ ಸೆಕ್ಷನ್ 144 ಹೇರಲಾಗಿದೆ.
ಹೊಸ ವರ್ಷಕ್ಕೆ ದೇವಸ್ಥಾನಕ್ಕೆ ಹೋಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಗಲು ಹೊತ್ತಿನಲ್ಲಿ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ದೇವರಾಯನ ದುರ್ಗ ಮೀಸಲು ಅರಣ್ಯ ಪ್ರದೇಶ ಆಗಿರುವುದರಿಂದ ಈ ಪ್ರದೇಶದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿ ಮಾಡದಂತೆ ನಿಷೇಧಾಜ್ಞೆ ಜಾರಿಯಾಗಿದೆ. ಈ ನಡುವೆ ಈಗಲೇ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಮಧ್ಯಾಹ್ನದ ನಂತರ ಕ್ಲೋಸ್ ಆಗುವ ಹಿನ್ನೆಲೆ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಗೆ ಪ್ರವಾಸಿಗರು ದೌಡಾಯಿಸುತಿದ್ದಾರೆ. ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದಾರೆ.
