ಉದಯವಾಹಿನಿ, ಚೀನಾ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಈ ದೇಶದಲ್ಲಿ ಸುಮಾರು 22 ಮಿಲಿಯನ್ ಮುಸ್ಲಿಮರು ವಾಸಿಸುತ್ತಿದ್ದಾರೆ ಎನ್ನಲಾಗುತ್ತದೆ. ಇವರಲ್ಲಿ ಹೆಚ್ಚಿನವರು ಉಯ್ಘರ್ ಮುಸ್ಲಿಮರು. ಆದರೆ ಸರ್ಕಾರದ ಕಠಿಣ ಸೆನ್ಸಾರ್‌ಶಿಪ್‌ನಿಂದಾಗಿ ನಿಖರ ಅಂಕಿಅಂಶಗಳು ಲಭ್ಯವಿಲ್ಲ. ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ವಾಸಿಸುವ ಮುಸ್ಲಿಂ ಸಮುದಾಯದ ಮೇಲೆ ಹಲವು ವರ್ಷಗಳಿಂದ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಧಾರ್ಮಿಕ ಆಚರಣೆ, ಉಡುಗೆ, ಪೂಜೆ ಸೇರಿದಂತೆ ದಿನನಿತ್ಯದ ಜೀವನದಲ್ಲಿಯೇ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿದೆ. ಬೆಳಕಿಗೆ ಬಂದಿರುವ ವರದಿಗಳ ಪ್ರಕಾರ, 2017 ರಿಂದ 2019ರ ಅವಧಿಯಲ್ಲಿ ಸುಮಾರು ಒಂದು ಮಿಲಿಯನ್ ಮುಸ್ಲಿಮರನ್ನು “ಪುನಶ್ಚೇತನ ಶಿಬಿರ”ಗಳ ಹೆಸರಿನಲ್ಲಿ ಬಂಧಿಸಲಾಗಿದೆ. ಇಲ್ಲಿ ಚೀನೀ ಸಂಸ್ಕೃತಿ ಕಲಿಸುವ ನೆಪದಲ್ಲಿ ಕಠಿಣ ನಿಯಂತ್ರಣ ಹೇರಲಾಗಿದೆ ಎಂಬ ಆರೋಪಗಳಿವೆ. ಈ ಶಿಬಿರಗಳಿಂದ ತಪ್ಪಿಸಿಕೊಂಡ ಅನೇಕ ಉಯ್ಘರ್ ಮುಸ್ಲಿಮರು ಜೀವ ಉಳಿಸಿಕೊಳ್ಳಲು ಇತರ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಆದರೆ ಚೀನಾ ಸರ್ಕಾರ ಅವರನ್ನು ಅಲ್ಲಿಯೂ ಬಿಡದೆ, ಆಶ್ರಯ ನೀಡಿರುವ ದೇಶಗಳ ಮೇಲೆ ಒತ್ತಡ ಹೇರುತ್ತಿದೆ.

ಕೆಲವು ಸಣ್ಣ ದೇಶಗಳು ಚೀನಾದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು, ಪಲಾಯನ ಮಾಡಿದ ಉಯ್ಘರ್ ಮುಸ್ಲಿಮರನ್ನು ಮತ್ತೆ ಚೀನಾಕ್ಕೆ ಹಿಂತಿರುಗಿಸಿರುವ ಉದಾಹರಣೆಗಳಿವೆ. ಹಿಂತಿರುಗಿಸಲಾದ ಕೆಲವರನ್ನು ಜೈಲಿಗೆ ಕಳುಹಿಸಲಾಗಿದೆ ಎಂಬ ವರದಿಗಳೂ ಇವೆ. ಮಾನವ ಹಕ್ಕುಗಳ ವಿಚಾರದಲ್ಲಿ ಈಗಾಗಲೇ ಟೀಕೆಗೆ ಗುರಿಯಾಗಿರುವ ಚೀನಾದಲ್ಲಿ, ಮುಸ್ಲಿಂ ಸಮುದಾಯದ ಮೇಲಿನ ಈ ಕ್ರಮಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಭದ್ರತೆ ಕುರಿತು ಪ್ರಶ್ನೆಗಳು ಇನ್ನಷ್ಟು ಗಟ್ಟಿಯಾಗುತ್ತಿವೆ.

Leave a Reply

Your email address will not be published. Required fields are marked *

error: Content is protected !!