ಉದಯವಾಹಿನಿ, ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರು ಬುಧವಾರ ‘ಎಕ್ಸ್’ ನಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ವಿಡಿಯೋವವನ್ನು ಶೇರ್‌ ಮಾಡಿದ್ದು, ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಅಧಿಕಾರಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಹಲವಾರು ಪುರುಷರು ಮಹಿಳೆಯರ ಮೇಲೆ ಕೋಲುಗಳು ಮತ್ತು ಬಿದಿರಿನ ಕೋಲುಗಳಿಂದ ಕ್ರೂರವಾಗಿ ಹಲ್ಲೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್ ಉಪವಿಭಾಗದ ಬಸಂತಿ ಬ್ಲಾಕ್‌ನಲ್ಲಿರುವ ಉತ್ತರ ಭಂಗ್ನಮರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ದೂರುದಾರರು ಜಲೀಲ್ ಲಸ್ಕರ್, ಮುನ್ನಾ ಲಸ್ಕರ್, ಆರಿಫ್ ಲಸ್ಕರ್ ಮತ್ತು ಇತರರು ಎಂದು ಗುರುತಿಸಿದ ಆರೋಪಿಗಳು ತಮ್ಮ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದ ಅಧಿಕಾರಿ, ಮಹಿಳೆಯರ ವಿರುದ್ಧ ಇಂತಹ ಹಿಂಸಾಚಾರ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. “ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ಮಹಿಳಾ ವಿರೋಧಿ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು” ಎಂದು ಅವರು ಹೇಳಿದರು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದು, ದೃಶ್ಯಗಳನ್ನು “ಭಯಾನಕ” ಎಂದು ಕರೆದಿದ್ದಾರೆ ಮತ್ತು ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಕುಸಿತವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!