
ಉದಯವಾಹಿನಿ ನಾಗಮಂಗಲ: ವಿಶ್ವಭಾಷೆಯಾದಸಂಗೀತವನ್ನು ನಾದೋಪಾಸನೆಯ ಮೂಲಕ ಕಲಾ ಸರಸ್ವತಿಯನ್ನು ಆರಾಧಿಸುವುದಾಗಿದೆ. ಪ್ರಕೃತಿಯಲ್ಲಿಯೂ ನಾದಮಯ ಸಂಗೀತವಿದೆ, ಅದನ್ನು ಆಸ್ವಾದಿಸುವ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮುಅಭಿಪ್ರಾಯಪಟ್ಟರು.ಅವರಿಂದು ತಾಲೂಕಿನ ಬಿಜಿ ನಗರದ ಬಿಜಿಎಸ್ ಸಭಾಂಗಣದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಕಾಲೇಜು ವತಿಯಿಂದ ಏರ್ಪಡಿಸಿದ್ದ “ರಾಗ” ಸಂಗೀತ ಕಚೇರಿ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಂಸ್ಕೃತಿಯ ಪಠ್ಯಕ್ರಮದ ಜೊತೆಗೆ ಸಕಲ ಕಲೆಗಳ ಮೇರು, ಸಂಗೀತದ ಸಂಸ್ಕಾರವನ್ನು ಚಿಕ್ಕಂದಿನಲ್ಲೇ ಮೈಗೂಡಿಸಲು ಶ್ರೀ ಮಠವು ಸಂಕಲ್ಪ ತೊಟ್ಟಿದ್ದು, ಆ ಮೂಲಕ ನಡೆಯುತ್ತಿರುವ ಮೊದಲ ಕಾರ್ಯಕ್ರಮವಾಗಿದೆ ಎಂಬುದನ್ನು ಹಂಚಿಕೊಂಡರು. ಸಂಗೀತ ಮೊದಲಾದ ಕಲಾ ಪ್ರಕಾರಗಳ ಅಭಿಪ್ರೇರಣೆಯಿಂದ ವಿದ್ಯಾರ್ಥಿಗಳ ಬದುಕು ಹಸನಾಗಲಿ ಎಂದು ಹಾರೈಸಿದರು.ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಂ ಎ ಶೇಖರ್ ಉದ್ಘಾಟನಾ ನುಡಿಗಳನ್ನು ಬಿತ್ತರಿಸಿ, ಶುಭ ಹಾರೈಸಿದರು. ಸಮಾರಂಭದ ನಂತರ ನಡೆದ ಸಂಗೀತ ಕಛೇರಿಯ ಗಾಯನ ಮತ್ತು ಹಾರ್ಮೋನಿಯಂನಲ್ಲಿ ಬ್ರಹ್ಮಚಾರಿ ಸಾಯಿ ಕೀರ್ತಿನಾಥ ಜೀ, ಪಕ್ಕವಾದ್ಯ ಕಲಾವಿದರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ ಮೈಸೂರಿನ ಎ ಚಂದನ್ ಕುಮಾರ್, ತಬಲ: ರಾಜೇಂದ್ರ ನಾಕೋಡ್, ಮೃದಂಗ ವಿದ್ವಾನ್ ವಿ ಪ್ರವೀಣ್, ಮೋರ್ಚಿಂಗ್: ವಿದ್ವಾನ್ ಬಿ ರಾಜಶೇಖರ್, ಹಾಗೂ ಖಂಜಿರಾದಲ್ಲಿ ವಿದ್ವಾನ್ ಎ ಎಸ್ ಎನ್ ಸ್ವಾಮಿ ಭಾಗವಹಿಸಿ ಕರ್ನಾಟಿಕ್ ಸಂಗೀತದ ರಸದೌತಣ ನೀಡಿದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ. ಸಿ ಕೆ ಸುಬ್ಬರಾಯ, ಸಾಂಸ್ಥಿಕ ಕಾಲೇಜು ಪ್ರಾಂಶುಪಾಲರುಗಳಾದ ಡಾ. ಬಿ ಕೆ ನರೇಂದ್ರ, ಡಾ. ಎಂ ಜಿ ಶಿವರಾಮು, ಡಾ. ಬಿ ರಮೇಶ್, ಪ್ರೊ. ಎನ್ ರಾಮು, ಪ್ರೊ. ಚಂದ್ರಶೇಖರ್, ಟಿ ಎನ್ ಶಿಲ್ಪಾ, ವಿ ಪುಟ್ಟಸ್ವಾಮಿ, ಮೈಸೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಹಾಗೂ ಅನೇಕರು ಹಾಜರಿದ್ದರು.
