ಉದಯವಾಹಿನಿ ಕುಶಾಲನಗರ :-ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬ0ಧಿಸಿದ0ತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಇರುವ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಶ್ರಮಿಸುವಂತೆ ಸೂಚಿಸಿದರು.ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನ ಸಂಬ0ಧಿಸಿದ0ತೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ತೊಡಗಿಸಿಕೊಂಡು ವಿಮಾ ಯೋಜನೆಯನ್ನು ತಲುಪಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಕ್ ಅವರು ಮಾಹಿತಿ ನೀಡಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ೨೦೨೩-೨೪ ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮತ್ತಿತರ ಪ್ರಾಕೃತಿಕ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬ0ಧಿಸಿದ0ತೆ, ಕೃಷಿ ವಿಮಾ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟಿಯಕೃತ ಬ್ಯಾಂಕ್‌ಗಳಲ್ಲಿ ಲಭ್ಯವಿದ್ದು, ಈ ಯೋಜನೆಯಡಿ ಅರ್ಜಿಯನ್ನು ರಾಷ್ಟಿಯಕೃತ ಬ್ಯಾಂಕ್‌ಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿಗೆ ಸಂಬ0ಧಿಸಿದ0ತೆ ಭತ್ತ (ನೀರಾವರಿ) ಸಾಮಾನ್ಯ (ಪ್ರತಿ ಹೆಕ್ಟೇರ್‌ಗೆ) ವಿಮಾ ಮೊತ್ತ ರೂ.೯೩,೨೫೦, ರೈತರ ವಿಮಾ ಕಂತು ಶೇ.೨, ರೈತರ ವಿಮಾ ಕಂತು ಮೊತ್ತ ರೂ.೧೮೬೫ ಆಗಿದ್ದು, ಕೃಷಿಕರು ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್, ೧೬ ಕೊನೆಯ ದಿನವಾಗಿದೆ ಎಂದು ವಿವರಿಸಿದರು.
ಹಾಗೆಯೇ ಭತ್ತ(ಮಳೆಯಾಶ್ರಿತ) ವಿಮಾ ಮೊತ್ತ ರೂ.೬೩,೭೫೦ ಆಗಿದ್ದು, ರೈತರ ವಿಮಾ ಕಂತು ಶೇ.೨ ಆಗಿದೆ. ಆ ನಿಟ್ಟಿನಲ್ಲಿ ರೈತರ ವಿಮಾ ಕಂತು ಮೊತ್ತ ರೂ.೧೨೭೫ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್, ೧೬ ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಮುಸುಕಿನಜೋಳ(ಮಳೆಯಾಶ್ರಿತ) ಸಾಮಾನ್ಯ ವಿಮಾ(ಪ್ರತಿ ಹೆಕ್ಟೇರ್‌ಗೆ) ವಿಮಾ ಮೊತ್ತ ರೂ.೫೬,೫೦೦, ರೈತರ ವಿಮಾ ಕಂತು ಶೇ.೨೨ ಆಗಿದ್ದು, ರೈತರ ವಿಮಾ ಕಂತು ಮೊತ್ತ ರೂ.೧೨,೪೩೦ ಆಗಿದೆ. ರೈತರು ಹೆಸರು ನೋಂದಾಯಿಸಿಕೊಳ್ಳಲು ಜುಲೈ, ೩೧ ಕೊನೆಯ ದಿನವಾಗಿದೆ ಎಂದರು.ಹೆಚ್ಚಿನ ಮಾಹಿತಿಗೆ ಕೃಷಿ ವಿಮಾ ಕಂಪನಿಯ ದೂ.ಸಂ. ೧೮೦೦೪೨೫೦೫೦೫, ವಿಮಾ ಕಂಪನಿಯ ಪ್ರತಿನಿಧಿಗಳಾದ ಸ್ಮಿತಾ ಸಿ.ಡಿ, ದೂ.ಸಂ. ೭೦೧೯೯೬೯೯೪೨ ಹಾಗೂ ಸತೀಶ್ ಎಚ್.ಆರ್ ದೂರವಾಣಿ ಸಂ: ೮೬೧೮೨೩೪೦೬೯ ಸಂಪರ್ಕಿಸಬಹುದು. ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಶಬನಾ ಎಂ.ಶೇಕ್ ಅವರು ವಿವರಿಸಿದರು.ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್ ಅವರು ಮಾಹಿತಿ ನೀಡಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಕಾಳುಮೆಣಸು ಬೆಳೆಗೆ ಒಟ್ಟು ರೂ.೪೭ ಸಾವಿರ ಹಾಗೂ ಅಡಿಕೆ ಬೆಳೆಗೆ ರೂ.೧,೨೮,೦೦೦ ಆಗಿದೆ. ವಿಮಾ ಕಂಪನಿಗೆ ಒಟ್ಟು ವಿಮಾ ಮೊತ್ತಕ್ಕೆ ರೈತರು ಕಾಳುಮೆಣಸು ಬೆಳೆಗೆ ಶೇ.೫ ರ ವಿಮಾ ಮೊತ್ತ ರೂ. ೨೩೫೦ ಹಾಗೂ ಅಡಿಕೆ ಬೆಳೆಗೆ ರೂ. ೬೪೦೦ ಪ್ರತಿ ಹೆಕ್ಟೇರ್ ಪಾವತಿಸಬೇಕಿದೆ. ವಿಮಾ ನೋಂದಣಿಗೆ ಜುಲೈ, ೩೧ ಕೊನೆ ದಿನವಾಗಿದೆ ಎಂದು ತಿಳಿಸಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಇಲಾಖೆ ವತಿಯಿಂದ ಹೊರತಂದಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸಂಬAಧ ಕರಪತ್ರವನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬಿಡುಗಡೆ ಮಾಡಿದರು.
ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಅಂಕೇಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್, ನಬಾರ್ಡ್ ವ್ಯವಸ್ಥಾಪಕರಾದ ರಮೇಶ್ ಬಾಬು, ಕೃಷಿ ಇಲಾಖೆ ಉಪ ನಿರ್ದೇಶಕರಾದ ಬಾಲರಾಜ್ ರಂಗರಾವ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಎಂ.ಕೆ.ಡೀನಾ, ಮಂಜುನಾಥ್ ಶೆಟ್ಟಿ, ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಸಹಕಾರ ಇಲಾಖೆ ಉಪ ನಿಬಂಧಕರಾದ ಕೃಷ್ಣಪ್ರಸಾದ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾಗರಾಜು, ಕೃಷಿ ಅಧಿಕಾರಿ ವರದರಾಜು, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು, ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!