
ಉದಯವಾಹಿನಿ,ಶಿಡ್ಲಘಟ್ಟ : ಮದುವೆ ಅಂದ್ರೆ ಇಬ್ಬರ ಮನೆಯವರು ನೋಡಿ ಮದುವೆ ಮಾಡೋದು, ಅಥವಾ ಪ್ರೀತಿ ಮಾಡಿ ಮದುವೆಯಾಗೋದು ಇದು ಸಹಜವಾಗಿರುತ್ತೆ ಆದರೆ ಇಲ್ಲೊಂದು ಮದುವೆ ವಿಚಿತ್ರ ರೀತಿಯಲ್ಲಿ ಆಗಿದ್ದು, ವರನ ಪಾಲಿಗೆ ಈ ಮದುವೆ ಒಂದು ಸಿಹಿ ನೆನಪಾಗಿಲ್ಲ. ಏಕೆಂದರೆ ಇಲ್ಲಿ ಈತ ಮದುವೆಗೂ ಮುನ್ನ ಪತ್ನಿಯಿಂದ ಥಳಿಸಿಕೊಂಡು ಮದುವೆಯಾಗಿದ್ದಾನೆ. ಹೀಗೆ ವಧುವಿನಿಂದ ವರನಿಗೆ ಥಳಿಸಿಯೇ ಕುಟುಂಬಸ್ಥರು ಈ ಮದುವೆಯನ್ನು ಮಾಡಿಸಿದ್ದಾರೆ.
ಶಿಡ್ಲಘಟ್ಟದ ನಗರದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಈ ಮದುವೆ ನಡೆದಿದೆ. ಚಿಕ್ಕಬಳ್ಳಾಫುರ ತಾಲೂಕಿನ ಚಿಕ್ಕಕಿರುಗುಂಬಿ ಯುವಕ ಚೇತನ್ ಹಾಗೂ ಅದೇ ತಾಲೂಕಿನ ಇಟಪನಹಳ್ಳಿ ನಿವಾಸಿ ಯುವತಿಯ ಮಧ್ಯೆ ಈ ಮದುವೆ ನಡೆದಿದೆ.ಯುವತಿಯ ಮನೆಯವರು ಹಾಗೂ ಕೆಲವು ಸಂಘಗಳವರು ಜೊತೆಯಾಗಿ ಬಲವಂತವಾಗಿ ಈ ಮದುವೆ ಮಾಡಿಸಿದ್ದು, ಮದುವೆಗೂ ಮುನ್ನ ವರನಿಗೆ ವಧುವಿನಿಂದ ಹೊಡೆಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿಯಿದ್ದು, ವಧು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಆಗ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಈ ರೀತಿಯಲ್ಲಿ ಮದುವೆ ಮಾಡಿಸಲಾಗಿದೆ. ಹೀಗೆ ಹೊಡೆದು ಬಡಿದು ಮದುವೆ ಮಾಡಿಸಿ, ಬಳಿಕ ಅವೆಲ್ಲವನ್ನೂ ವಿಡಿಯೋ ಮಾಡಿ ಆಶೀರ್ವಾದವನ್ನೂ ಮಾಡಲಾಗಿದೆ.
