
ಉದಯವಾಹಿನಿ ಬೆಂಗಳೂರು: ‘ಪುಸ್ತಕೋದ್ಯಮಕ್ಕೆ ಸರ್ಕಾರದ ಪ್ರೋತ್ಸಾಹ ಹೆಚ್ಚಾದಂತೆ ಸಾಹಿತ್ಯದ ಗುಣಮಟ್ಟ ಕಡಿಮೆ ಆಗುತ್ತದೆ. ಆದ್ದರಿಂದ ಪುಸ್ತಕೋದ್ಯಮ ಬೆಳೆಯಲು ಸಮಾಜದ ಪ್ರೋತ್ಸಾಹ ಅತ್ಯಗತ್ಯ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.’ಪುಸ್ತಕೋದ್ಯಮ ಮೊದಲಿನಿಂದಲೂ ಸಂಕಷ್ಟ ಎದುರಿಸುತ್ತಿದೆ. ಈ ಉದ್ಯಮ ಓದುಗನಿಂದ ಬೆಳೆಯಬೇಕು. ಸರ್ಕಾರದ ಪ್ರೋತ್ಸಾಹ ಹೆಚ್ಚಾದಂತೆ ಕಳಪೆ ಸಾಹಿತ್ಯ ಹೆಚ್ಚಾಗುತ್ತದೆ. 200 ಪುಟಗಳ ಪುಸ್ತಕ ಬರೆದರೆ ಲಕ್ಷ ರೂಪಾಯಿ ಎಂದು ಘೋಷಿಸಿದರೆ ವರ್ಷಕ್ಕೆ 5-6 ಪುಸ್ತಕಗಳನ್ನು ಬರೆಯುವ ಸಾಹಿತಿಗಳು ಹುಟ್ಟಿಕೊಳ್ಳುತ್ತಾರೆ. ಓದುಗರು ಸಾಹಿತ್ಯ ಕೃತಿಗಳನ್ನು ಖರೀದಿ ಮಾಡಿ, ಅದರ ಆದಾಯ ಲೇಖಕನಿಗೆ ಸಿಗುವವರೆಗೂ ಪುಸ್ತಕೋದ್ಯಮ ಸಂಕಷ್ಟದಲ್ಲಿಯೇ ಇರುತ್ತದೆ. ಹೀಗಾಗಿ, ಸಮಾಜ ಹಾಗೂ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಸಿಗಬೇಕು’ ಎಂದರು.ಶಾಸಕ ಪ್ರದೀಪ್ ಈಶ್ವರ್, ‘ರಾಜಕೀಯ ನಾಯಕರು ಇಷ್ಟವಾದರೆಂಬ ಕಾರಣಕ್ಕೆ ಅವರ ಹಿಂದೆ ಹೋಗಿ, ಜೀವನವನ್ನು ಹಾಳು ಮಾಡಿಕೊಳ್ಳಬಾರದು. ರಾಜಕೀಯ ನಾಯಕರು ಕೇವಲ ತಮ್ಮ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಈ ಬಗ್ಗೆ ನನಗೆ ಅನುಭವವಾಗಿದ್ದು, ನಾಯಕರನ್ನು ನಂಬಿ ಜೀವನದಲ್ಲಿ ಕಷ್ಟ ಅನುಭವಿಸಿದ್ದೇನೆ’ ಎಂದು ಹೇಳಿದರು.
