ಉದಯವಾಹಿನಿ, ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 44 ರನ್‌ ಸಿಡಿಸಿದ ಭಾರತ ತಂಡದ ರಿಂಕು ಸಿಂಗ್‌ ಅವರನ್ನು ನ್ಯೂಜಿಲೆಂಡ್‌ ಮಾಜಿ ವೇಗಿ ಸೈಮನ್‌ ದೌಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಬುಧವಾರ ನಾಗ್ಪರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದ ರಿಂಕು, 220ರ ಸ್ಟ್ರೈಕ್‌ ರೇಟ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 44 ರನ್‌ ಬಾರಿಸಿದ್ದರು. ಆ ಮೂಲಕ ಭಾರತ ತಂಡ 238 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
ಈ ಪಂದ್ಯದಲ್ಲಿ ಭಾರತ ತಂಡ 48 ರನ್‌ಗಳ ಗೆಲುವು ಪಡೆದ ಬಳಿಕ ನ್ಯೂಜಿಲೆಂಡ್‌ ಮಾಜಿ ವೇಗಿ ಸೈಮನ್‌ ದೌಲ್‌ ಅವರು, ರಿಂಕು ಸಿಂಗ್‌ ಅವರ ಸ್ಪೋಟಕ ಇನಿಂಗ್ಸ್‌ ಅನ್ನು ಶ್ಲಾಘಿಸಿದರು. ರಿಂಕು ಸಿಂಗ್‌ ಅವರು ಅತ್ಯುತ್ತಮ ಮ್ಯಾಚ್‌ ಫಿನಿಷರ್‌ ಎಂದ ಕ್ರಿಕೆಟ್‌ ನಿರೂಪಕ, ಅವರು ಈಗಾಗಲೇ ಭಾರತದ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಬೇಕಾಗಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಅವರು, “ರಿಂಕು ಸಿಂಗ್‌ ಅವರು ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು. ಕಳೆದ 4-5 ವರ್ಷಗಳ ಹಿಂದೆಯೇ ನಾವು ಅವರ ಆಟವನ್ನು ನೋಡಿದ್ದೇವೆ. ಆದರೆ, ಅವರಿನ್ನೂ ಭಾರತ ಟಿ20 ತಂಡದ ಪರ ಹೆಚ್ಚಿನ ಪಂದ್ಯಗಳನ್ನು ಆಡಬೇಕಾಗಿತ್ತು ಎಂಬ ಭಾವನೆ ನಮಗೆ ಉಂಟಾಗುತ್ತಿದೆ. ಇಲ್ಲಿಯವರೆಗೂ ಅವರು ಟೀಮ್‌ ಇಂಡಿಯಾ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಬೇಕಾಗಿತ್ತು,” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!