ಉದಯವಾಹಿನಿ, ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿ ಶನಿವಾರ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ಗಳು ಮುರಿಬಿದ್ದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಒಟ್ಟು 42,345 ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಸಚಿವರು ಆಗಮಿಸುವುದಕ್ಕೂ ಮುನ್ನವೇ ಈ ಅವಘಡ ಸಂಭವಿಸಿದೆ.

ವೇದಿಕೆಯ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಇಂದು ಬೆಳಗ್ಗೆ ಈ ಕಟೌಟ್ ಗಳು ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ದೊಡ್ಡ ಅವಘಡ ಸಂಭವಿಸಿಲ್ಲ. ಕುಸಿದುಬಿದ್ದ ಕಟೌಟ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ.
ಮನೆಗಳ ಹಸ್ತಾಂತರ ಕಾರ್ಯಕ್ರಮವು ಶನಿವಾರ ಬೆಳಗ್ಗೆ 11 ಕ್ಕೆ ನಡೆಯಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ರಾಮಲಿಂಗಾರೆಡ್ಡಿ ಸೇರಿದಂತೆ ಸಚಿವ ಸಂಪುಟದ ಸಹದ್ಯೋಗಿಗಳು, ಶಾಸಕರು, ಜನಪ್ರತಿನಿಧಿಗಳೆಲ್ಲರೂ ಪಾಲ್ಗೊಳ್ಳಲಿದ್ದಾರೆ. 2016-17ರಲ್ಲಿ ಮಂಜೂರಾಗಿರುವ 1,80,253 ಮನೆಗಳ ಪೈಕಿ ಮೊದಲ ಹಂತದಲ್ಲಿ ಕಳೆದ ವರ್ಷ 36,789 ಮನೆ ಹಸ್ತಾಂತರಿಸಲಾಗಿತ್ತು. ಇದೀಗ 2ನೆಯ ಹಂತದಲ್ಲಿ ಹುಬ್ಬಳ್ಳಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ 42,345 ಮನೆಗಳ ಹಸ್ತಾಂತರ ನಡೆಯಲಿದೆ. ಇನ್ನೆರಡು ತಿಂಗಳಲ್ಲಿ ಮತ್ತೆ 30 ಸಾವಿರ ಮನೆ ಹಸ್ತಾಂತರಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿನ 1008 ಹಾಗೂ ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಹಕ್ಕುಪತ್ರಗಳನ್ನು ವಿತರಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!