ಉದಯವಾಹಿನಿ, ಇಂಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೆವಿನ್ ಪೀಟರ್ಸನ್ ಹೆಸರಿನಲ್ಲಿದ್ದ ದಶಕಗಳ ಕಾಲದ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಇಂಗ್ಲೆಂಡ್ ಪರ ಅತ್ಯಧಿಕ ಬಾರಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಗೆದ್ದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರೂಟ್ ಆಲ್ ರೌಂಡ್ ಪ್ರದರ್ಶನ ನೀಡಿದರು. ಶ್ರೀಲಂಕಾ ನೀಡಿದ 220 ರನ್ ಗುರಿಯನ್ನು ಬೆನ್ನಟ್ಟುವಾಗ ಕೇವಲ 90 ಎಸೆತಗಳಲ್ಲಿ 75 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬೌಲಿಂಗ್‌ನಲ್ಲೂ ಮಿಂಚಿದ್ದ ಇವರು, ಕೇವಲ 2.3 ಓವರ್‌ಗಳಲ್ಲಿ 13 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ಈ ಅಮೋಘ ಪ್ರದರ್ಶನಕ್ಕಾಗಿ ರೂಟ್ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ನೀಡಲಾಯಿತು. ಇದು ಇಂಗ್ಲೆಂಡ್ ಪರ ಅವರು ಪಡೆದ 27ನೇ ಪ್ರಶಸ್ತಿಯಾಗಿದೆ. ಈ ಮೂಲಕ ಕೆವಿನ್ ಪೀಟರ್ಸನ್ ಅವರ ದಾಖಲೆಯನ್ನು ಅವರು ಹಿಂದಿಕ್ಕಿದ್ದಾರೆ.ಪ್ರಸ್ತುತ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಜೋ ರೂಟ್, ಈ ಪ್ರಶಸ್ತಿಯೊಂದಿಗೆ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
