ಉದಯವಾಹಿನಿ, ಬೆಂಗಳೂರು, : ಮದ್ಯದ ಅಮಲಿನಲ್ಲಿ ಸಿಗರೇಟ್ ಲೈಟರ್ ವಿಚಾರಕ್ಕೆ ಉಂಟಾದ ಜಗಳ ಉಲ್ಬಣಿಸಿ ಕೋಪದಿಂದ ಸ್ನೇಹಿತನನ್ನು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ವಿಚಿತ್ರ ರೀತಿಯಲ್ಲಿ ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅದೂ ಚಲಿಸುವ ಕಾರಿನಲ್ಲಿ ನೇತಾಡುತ್ತಿದ್ದ ಸ್ನೇಹಿತನನ್ನು ಬಿಡದೆ ಮರಕ್ಕೆ ಗುದ್ದಿಸಿ ಗುದ್ದಿಸಿ ಕೊಲೆ ಮಾಡಿದ್ದಾನೆ.
ವೀರಸಂದ್ರ ನಿವಾಸಿ ಪ್ರಶಾಂತ್ (35) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಕೆ.ಆರ್.ಪುರ ನಿವಾಸಿ ರೋಷನ್‌ನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೀರಸಂದ್ರ ಸಮೀಪ ಭಾನುವಾರ ಕ್ರಿಕೆಟ್ ಪಂದ್ಯದ ಬಳಿಕ ಈ ಸ್ನೇಹಿತರು ಮದ್ಯ ಸೇವಿಸಿ ಕಿತ್ತಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಸಂದ್ರ ಸಮೀಪ ಎಂಲ್ ಮಾಲ್ ಹಿಂಭಾಗದಲ್ಲಿ ಭಾನುವಾರ ರಾತ್ರಿ ಸ್ನೇಹಿತರಾದ ಪ್ರಶಾಂತ್ ಹಾಗೂ ರೋಷನ್ ಕ್ರಿಕೆಟ್ ಆಟವಾಡಿದ್ದಾರೆ. ಬಳಿಕ ಆ ಮೈದಾನದಲ್ಲಿ ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ಈ ವೇಳೆ ಸಿಗರೇಟ್ ಲೈಟರ್ ವಿಚಾರಕ್ಕೆ ಪರಸ್ಪರ ಜಗಳವಾಡಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಇಬ್ಬರೂ ಬಿಯರ್ ಬಾಟಲ್‌ನಿಂದ ಹೊಡೆದಾಡಿದ್ದಾರೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ತಿಳಿಸಿದ್ದಾರೆ.
