ಉದಯವಾಹಿನಿ, ಬೆಂಗಳೂರು: ಎಂಎಸ್ ಅಮಾಡಿಯಾಸ್ ಸಾಫ್ಟ್‌ವೇರ್ ಲ್ಯಾಬ್ಸ್ ಇಂಡಿಯಾ ಕಂಪನಿಗೆ ಅದರ ಹಿರಿಯ ಸಿಬ್ಬಂದಿಯೇ ಬರೋಬ್ಬರಿ 87 ಕೋಟಿ ರೂಪಾಯಿ ಮೌಲ್ಯದ ಡೆಟಾ ದೋಚಿರೋ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶ ಮೂಲದ ಆಶುತೋಷ್ ನಿಗಮ್ ಎಂಬಾತ ಈ ವಂಚನೆ ನಡೆಸಿರುವ ಆರೋಪದ ಮೇಲೆ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪನಿಯಲ್ಲಿ ಸಾಫ್ಟ್‌ವೇರ್ ಖರೀದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆಶುತೋಷ್ ನಿಗಮ್, ಇನೋವೇಟಿವ್ ಶೆಡ್ಯೂಲಿಂಗ್ ಜೊತೆಗಿನ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಆತ, 2025ರ ಅಕ್ಟೋಬರ್ 11ರಂದು ಕಂಪನಿಯ ಅನುಮತಿಯಿಲ್ಲದೆ ಪ್ರಮುಖ ಡೇಟಾವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಆಶುತೋಷ್‌ನ ಈ ಕೃತ್ಯದ ಬಗ್ಗೆ ಮಾಹಿತಿ ತಿಳಿದ ಕೂಡಲೇ, 2025ರ ಡಿಸೆಂಬರ್ 3ರಂದು ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿತು. ನಂತರ ನಡೆಸಿದ ಆಂತರಿಕ ತನಿಖೆಯ ವೇಳೆ, ಬರೋಬ್ಬರಿ 8 ಲಕ್ಷ ಯೂರೋ (ಭಾರತೀಯ ಮೌಲ್ಯದಲ್ಲಿ ಸುಮಾರು 87 ಕೋಟಿ ರೂಪಾಯಿ) ಮೌಲ್ಯದ ಡೇಟಾ ಕಳ್ಳತನ ಮತ್ತು ವಂಚನೆ ನಡೆದಿರುವುದು ಪತ್ತೆಯಾಗಿದೆ.
