ಉದಯವಾಹಿನಿ, ಬೆಂಗಳೂರು: ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದ್ದು, ಬೇಡಿಕೆಗಳ ಈಡೇರಿಕೆಗೆ ಸಾರಿಗೆ ಸಂಘಟನೆಗಳು, ನಾಳೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಿವೆ. ನಾಳೆ ಸಂಜೆಯೊಳಗೆ ಬೇಡಿಕೆ ಈಡೇರದೇ ಇದ್ರೇ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದೆ.
ಕೆಎಸ್‌ಆರ್‌ಟಿಸಿ ಸೇರಿದಂತೆ ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ವೇತನ ಪರಿಷ್ಕರಣೆ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಾಳೆ ಅಂದರೆ ಜನವರಿ 29ರಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ. ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಬರೋ ಸಾವಿರಾರು ಸಾರಿಗೆ ನೌಕರರು ಫ್ರೀಡಂಪಾರ್ಕ್ನಲ್ಲಿ ಜಮಾಯಿಸಲಿದ್ದಾರೆ. ಬೆಳ್ಳಿಗ್ಗೆ 10 ಗಂಟೆಯಿಂದ 4ಗಂಟೆವರೆಗೂ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರಮುಖವಾಗಿ ಎರಡು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಲೋ ನಡೆಸಲಾಗುತ್ತಿದೆ.
ಸರ್ಕಾರದ ಎದುರು ಸಾರಿಗೆ ನೌಕರರು ಎರಡು ಬೇಡಿಕೆ ಇಟ್ಟಿದ್ದಾರೆ. ಈ ಪೈಕಿ 2020ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಭಾಕಿ ನೀಡಬೇಕು. 2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಲಾಗುತ್ತಿದೆ. ಇನ್ನೂ ನಾಳೆ ಸಂಜೆವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದೇ ಹೋದರೆ ನಾಡಿದ್ದು ಅಂದ್ರೆ ಜನವರಿ 30ರಿಂದ ಸಾರಿಗೆ ನೌಕರರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.
