ಉದಯವಾಹಿನಿ, ಪ್ಯಾರಿಸ್ : 15 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸಿ ಫ್ರಾನ್ಸ್ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಕ್ಕಳನ್ನು ಅತಿಯಾದ ಸ್ಕ್ರೀನ್ ಟೈಮ್ ನಿಂದ ಹೊರಗಿಡಲು ಮತ್ತು ಅವರ ಸುರಕ್ಷತೆಯ ನಿಟ್ಟಿನಲ್ಲಿ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸೋಮವಾರದಿಂದ ಮಂಗಳವಾರ ಮಧ್ಯರಾತ್ರಿವರೆಗೆ ನಡೆದ ಸುದೀರ್ಘ ಅಧಿವೇಶನದಲ್ಲಿ ಮಸೂದೆ ಪರ 130 ಮತಗಳು ಚಲಾವಣೆ ಆದವು. ಈ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.ಈ ಮಸೂದೆ ಈಗ ಕಾನೂನಾಗುವ ಮೊದಲು ಫ್ರಾನ್ಸ್‌ನ ಮೇಲ್ಮನೆಯಾದ ಸೆನೆಟ್‌ಗೆ ಹೋಗುತ್ತದೆ.
ಅಧ್ಯಕ್ಷ ಮ್ಯಾಕ್ರನ್ ಅವರು ಈ ಕುರಿತು X ಪೋಸ್ಟ್‌ನಲ್ಲಿ, ಫ್ರೆಂಚ್ ಮಕ್ಕಳು ಮತ್ತು ಹದಿಹರೆಯದವರನ್ನು ರಕ್ಷಿಸಲು ಇದು “ಪ್ರಮುಖ ಹೆಜ್ಜೆ” ಎಂದು ಶ್ಲಾಘಿಸಿದ್ದಾರೆ. ಪ್ರೌಢಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸುವ ಶಾಸನವನ್ನು, ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಜಾರಿಗೆ ತಂದಿತ್ತು. 16 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ಬಳಕೆಗೆ ಆಸ್ಟ್ರೇಲಿಯಾ ನಿಷೇಧ ಹೇರಿದ ನಂತರ ಫ್ರಾನ್ಸ್ ಸಹ ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ಎರಡನೇ ದೇಶವಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆ ಅಧಿಕವಾದಂತೆ, ಹೆಚ್ಚಿನ ಸ್ಕ್ರೀನ್ ಸಮಯವು ಮಕ್ಕಳ ಬೆಳವಣಿಗೆಗೆ ಹಾನಿ ಮಾಡುತ್ತಿದೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕ ಇದೆ.”ನಮ್ಮ ಮಕ್ಕಳು ಮತ್ತು ಹದಿಹರೆಯದವರ ಭಾವನೆಗಳು ಅಮೆರಿಕನ್ ಪ್ಲಾಟ್‌ಫಾರ್ಮ್‌ಗಳು ಅಥವಾ ಚೀನಿ ಅಲ್ಗಾರಿದಮ್‌ಗಳಿಗೆ ಮಾರಾಟಕ್ಕಿಲ್ಲ ” ಎಂದು ಮ್ಯಾಕ್ರನ್ ಶನಿವಾರ ವಿಡಿಯೋ ಸಂದೇಶದಲ್ಲಿ ಹೇಳಿದ್ದರು.
ಹೊಸ ಖಾತೆಗಳಿಗಾಗಿ 2026 ರ ಶೈಕ್ಷಣಿಕ ವರ್ಷದ ಆರಂಭದಿಂದಲೇ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಳಮನೆಯಲ್ಲಿ ಮ್ಯಾಕ್ರನ್‌ರ ಪಕ್ಷದ ನೇತೃತ್ವ ವಹಿಸಿರುವ ಮಾಜಿ ಪ್ರಧಾನಿ ಗೇಬ್ರಿಯಲ್ ಅಟ್ಟಲ್, ಸೆಪ್ಟಂಬರ್ 1 ರಿಂದ ನಿಷೇಧ ಜಾರಿಗೆ ಬರುವಂತೆ ಫೆಬ್ರವರಿ ಮಧ್ಯದೊಳಗೆ ಸೆನೆಟ್ ಈ ಮಸೂದೆಯನ್ನು ಅಂಗೀಕರಿಸುತ್ತದೆ ಎಂದು ಆಶಿಸುವುದಾಗಿ ಹೇಳಿದರು. ವಯಸ್ಸಿನ ಮಿತಿಯನ್ನು ಅನುಸರಿಸದ “ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳು ಅಸ್ತಿತ್ವದಲ್ಲಿರುವ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಸಮಯವಿರುತ್ತದೆ” ಎಂದು ಅವರು ಹೇಳಿದರು.
