ಉದಯವಾಹಿನಿ , ಬ್ರಸೆಲ್ಸ್ (ಬೆಲ್ಜಿಯಂ): ಇರಾನ್ನಲ್ಲಿ ಪ್ರತಿಭಟನೆ ಹತ್ತಿಕ್ಕಲು ದಮನಕಾರಿ ಕ್ರಮ ಕೈಗೊಂಡ ಇರಾನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಅನ್ನು ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಲು ಯುರೋಪಿಯನ್ ಒಕ್ಕೂಟ ಸಮ್ಮತಿ ನೀಡಿದೆ. ಇದೊಂದು ಇಸ್ಲಾಮಿಕ್ ಗಣರಾಜ್ಯದ ಮೇಲೆ ಒತ್ತಡ ಹೆಚ್ಚಿಸುವ ಸಾಂಕೇತಿಕ ನಡೆ ಎಂದು ಒಕ್ಕೂಟದ ಉನ್ನತ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.
ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಮಾತನಾಡಿ, 27 ದೇಶಗಳ ಬಣದ ವಿದೇಶಾಂಗ ಮಂತ್ರಿಗಳು ಸರ್ವಾನುಮತದಿಂದ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ನ್ನು ಅಲ್-ಖೈದಾ, ಹಮಾಸ್ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪಿಗೆ ಸೇರಿಸಲಾಗುವುದು. ಭಯೋತ್ಪಾದನೆ ಮೂಲಕ ಕಾರ್ಯ ನಿರ್ವಹಿಸುವವರನ್ನು ಭಯೋತ್ಪಾದಕರೆಂದು ಪರಿಗಣಿಸಬೇಕು ಎಂದಿದ್ದಾರೆ.
ಇರಾನ್ನಲ್ಲಿ ತಲೆದೋರಿದ್ದ ಆರ್ಥಿಕ ಸಂಕಷ್ಟವು ಪ್ರತಿಭಟನೆಗೆ ನಾಂದಿ ಹಾಡಿತು. ದೇವಪ್ರಭುತ್ವಕ್ಕೆ ಸವಾಲಾದ ಈ ಪ್ರತಿಭಟನೆ ಹತ್ತಿಕ್ಕಲು ಇರಾನ್ ಕ್ರಾಂತಿಕಾರಿ ಗಾರ್ಡ್ ಅನ್ನು ಬಳಕೆ ಮಾಡಿತು. ದಮನಕಾರಿ ಕಾರ್ಯಾಚರಣೆಯಲ್ಲಿ ಕನಿಷ್ಠ 6,479 ಜನರನ್ನು ಕೊಲ್ಲಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಯಾವುದೇ ಸಂಘಟನೆ ತನ್ನ ಆಡಳಿತಕ್ಕಾಗಿ ತನ್ನದೇ ಸಾವಿರಾರು ಜನರನ್ನು ಕೊಲ್ಲುತ್ತದೆಯೋ ಅದು ಅವನತಿಯತ್ತ ಸಾಗುತ್ತದೆಎಂದು ಕಲ್ಲಾಸ್ ತಿಳಿಸಿದ್ದಾರೆ. ಈ ಹಿಂದೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳು ಕ್ರಾಂತಿಕಾರಿ ಗಾರ್ಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿವೆ.
ಇರಾನ್ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಮತ್ತು ಮರಣದಂಡನೆಗಳಿಗೆ ಪ್ರತಿಯಾಗಿ ಮಿಲಿಟರಿ ಕ್ರಮ ಜರುಗಿಸುವುದಾಗಿ ಅಮೆರಿಕ ಬೆದರಿಕೆ ಹಾಕಿದೆ. ಅಮೆರಿಕದ ಮಿಲಿಟರಿ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಹಲವಾರು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳನ್ನು ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸಿದೆ. ಇದರಿಂದ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಬಲಪ್ರಯೋಗ ನಡೆಸಲಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು, ಯುರೋಪಿಯನ್ ಒಕ್ಕೂಟದ ಈ ನಡೆಯನ್ನು ‘ಪಿಆರ್ ಸ್ಟಂಟ್’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕಿಡಿಕಾರಿದ್ದಾರೆ. ಇಂತಹ ನಿರ್ಬಂಧಗಳ ಪರಿಣಾಮವಾಗಿ ಇಂಧನ ಬೆಲೆಗಳು ಏರಿದರೆ ಯುರೋಪ್ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
