ಉದಯವಾಹಿನಿ , ನವದೆಹಲಿ: SWAT ಮಹಿಳಾ ಕಮಾಂಡೋ ಅಧಿಕಾರಿಯ ತಲೆಯನ್ನು ಜಿಮ್ ಡಂಬಲ್ನಿಂದ ಜಜ್ಜಿ ಆಕೆಯ ಪತಿಯೇ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಬಳಿಕ, ಮಹಿಳೆಯ ಸಹೋದರನಿಗೆ ಕರೆ ಮಾಡಿ ನಿನ್ನ ತಂಗಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿ ದಾರ್ಷ್ಟ್ಯ ಮೆರೆದಿದ್ದಾನೆ.
ಹತ್ಯೆಯಾದ ಕಮಾಂಡೋ ಅಧಿಕಾರಿಯನ್ನು 27 ವರ್ಷದ ಕಾಜಲ್ ಎಂದು ಗುರುತಿಸಲಾಗಿದೆ. ಇವರು ದೆಹಲಿ ಪೊಲೀಸ್ ವಿಶೇಷ ವಿಭಾಗದಲ್ಲಿ ಕರ್ತವ್ಯದಲ್ಲಿದ್ದರು. ಜನವರಿ 22 ರಂದು ಆಕೆಯ ಮೇಲೆ ಪತಿ ದಾಳಿ ಮಾಡಿದ್ದ, ಆಸ್ಪತ್ರೆಯಲ್ಲಿ ಜನವರಿ 25 ರಂದು ಉತ್ತರಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಧಿಕಾರಿ ಅಸುನೀಗಿದ್ದಾರೆ.
ನೈಋತ್ಯ ದೆಹಲಿಯ ದ್ವಾರಕಾ ಮೋರ್ನಲ್ಲಿರುವ ಅವರ ಮನೆಯಲ್ಲಿ ಸ್ವಾಟ್ ಕಮಾಂಡೋ ಕಾಜಲ್ ಮೇಲೆ ಆಕೆಯ ಪತಿ ಅಂಕುರ್ ಚೌಧರಿ (28) ಜಿಮ್ ಮಾಡಲು ಬಳಸುವ ಲೋಹದ ಡಂಬಲ್ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಬಳಿಕ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಗುದ್ದಿದ್ದಾನೆ. ಮೆದುಳು ನಿಷ್ಕ್ರಿಯವಾಗಿ ಆಕೆ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಕೊಂದ ಬಳಿಕ ಸಹೋದರನಿಗೆ ಕರೆ ಮಾಡಿದ ಆರೋಪಿ: ಸಾವಿಗೀಡಾದ ಮಹಿಳಾ ಕಮಾಂಡೋ ಸಹೋದರ ನಿಖಿಲ್ ನೀಡಿದ ಮಾಹಿತಿಯ ಪ್ರಕಾರ, ತನ್ನ ತಂಗಿಯನ್ನು ಆರೋಪಿ ಹತ್ಯೆ ಮಾಡಿದ ಬಳಿಕ ನನಗೆ ಕರೆ ಮಾಡಿದ. ಈ ಕರೆಯನ್ನು ರೆಕಾರ್ಡ್ ಮಾಡಿಕೊ. ಅದು ಪೊಲೀಸ್ ಪುರಾವೆಯಾಗಿ ಬಳಸಬಹುದು. ನಾನು ನಿನ್ನ ತಂಗಿಯನ್ನು ಕೊಂದಿದ್ದೇನೆ ಎಂದು ಹೇಳಿದ. ತಕ್ಷಣವೇ ಮನೆಗೆ ಬಂದು ನೋಡಿದಾಗ, ಕಾಜಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದು ತಿಳಿಸಿದ್ದಾರೆ. ಜನವರಿ 22 ರಂದು ಆಕೆಯ ಮೇಲೆ ಪತಿ ಭೀಕರ ಹಲ್ಲೆ ಮಾಡಿದ್ದ. ಐದು ದಿನಗಳ ಕಾಲ ಜೀವನ್ಮರಣದ ಹೋರಾಟದ ನಂತರ, ಜನವರಿ 27 ರ ಬೆಳಗ್ಗೆ ಗಾಜಿಯಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ನಿಖಿಲ್ ಹೇಳಿದ್ದಾರೆ.
