ಉದಯವಾಹಿನಿ, : ಅರಬ್ ದೇಶಗಳ ಶಕ್ತಿಯ ಸಂಕೇತವಾದ ತೈಲ ಮತ್ತು ಚಿನ್ನಕ್ಕೆ ಈಗ ಹೊಸ ಆಯಾಮ ಸಿಕ್ಕಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಸರ್ಕಾರ, ಇಡೀ ನಗರವನ್ನೇ ಚಿನ್ನದ ಥೀಮ್‌ನಲ್ಲಿ ರೂಪಿಸುವ ವಿಶಿಷ್ಟ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಯೋಜನೆಯಡಿ ವಿಶ್ವದ ಮೊದಲ ‘ಗೋಲ್ಡ್ ಸ್ಟ್ರೀಟ್’ ಅನ್ನು ದುಬೈನಲ್ಲಿ ನಿರ್ಮಿಸಲಾಗುತ್ತಿದೆ.
ಈ ಯೋಜನೆ ದುಬೈನ ಹೊಸ ‘ಗೋಲ್ಡ್ ಡಿಸ್ಟ್ರಿಕ್ಟ್’ ಭಾಗವಾಗಿದ್ದು, ಇದನ್ನು ‘ಗೋಲ್ಡ್ ಹೌಸ್’ ಅಥವಾ ‘ಗೋಲ್ಡನ್ ಸಿಟಿ’ ಎಂದು ಕರೆಯಲಾಗುತ್ತಿದೆ. ದುಬೈಯನ್ನು ಜಾಗತಿಕ ಮಟ್ಟದಲ್ಲಿ ಚಿನ್ನ ಮತ್ತು ಆಭರಣ ವ್ಯಾಪಾರದ ಅತಿದೊಡ್ಡ ಕೇಂದ್ರವನ್ನಾಗಿ ರೂಪಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಈ ಚಿನ್ನದ ರಸ್ತೆ ಸಂಪೂರ್ಣವಾಗಿ ಚಿನ್ನದ ಅಂಶಗಳಿಂದ ವಿನ್ಯಾಸಗೊಳ್ಳಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಚಿನ್ನದ ಥೀಮ್‌ನ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂಬುದು ವಿಶೇಷ. ಈಗಾಗಲೇ ಚಿನ್ನದ ವ್ಯಾಪಾರಕ್ಕೆ ಪ್ರಸಿದ್ಧವಾಗಿರುವ ದುಬೈನ ಡೀರಾ ಪ್ರದೇಶದಲ್ಲಿ ಈ ಗೋಲ್ಡ್ ಸ್ಟ್ರೀಟ್ ನಿರ್ಮಾಣವಾಗಲಿದೆ.
ಹೊಸ ಗೋಲ್ಡ್ ಡಿಸ್ಟ್ರಿಕ್ಟ್‌ನಲ್ಲಿ ಕನಿಷ್ಠ ಸಾವಿರಕ್ಕೂ ಹೆಚ್ಚು ಚಿಲ್ಲರೆ ಚಿನ್ನದ ಅಂಗಡಿಗಳು, ಸಗಟು ವ್ಯಾಪಾರ ಕೇಂದ್ರಗಳು, ಚಿನ್ನದ ಗಟ್ಟಿಗಳು, ಹೂಡಿಕೆ ಮತ್ತು ಆಭರಣಗಳಿಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಒಂದೇ ಸ್ಥಳದಲ್ಲಿ ಲಭ್ಯವಿರಲಿವೆ. ಇದರಿಂದ ಪ್ರವಾಸಿಗರು ಮತ್ತು ವ್ಯಾಪಾರಿಗಳಿಗೆ ಇದು ದೊಡ್ಡ ಆಕರ್ಷಣೆಯಾಗಲಿದೆ. ದುಬೈ ಡಿಪಾರ್ಟ್‌ಮೆಂಟ್ ಆಫ್ ಎಕಾನಮಿ ಅಂಡ್ ಟೂರಿಸಂ (DET) ಹಾಗೂ ದುಬೈ ಫೆಸ್ಟಿವಲ್ಸ್ ಅಂಡ್ ರಿಟೇಲ್ ಎಸ್ಟಾಬ್ಲಿಷ್‌ಮೆಂಟ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಇತ್ರಾ ದುಬೈ ಈ ಯೋಜನೆಯನ್ನು ಆರಂಭಿಸಿದೆ. DFRE ಸಿಇಒ ಅಹ್ಮದ್ ಅಲ್ ಖಾಜಾ ಮಾತನಾಡಿ, “ಚಿನ್ನ ದುಬೈನ ಸಂಸ್ಕೃತಿ ಮತ್ತು ವ್ಯಾಪಾರದಲ್ಲಿ ಆಳವಾಗಿ ಬೇರೂರಿದೆ. ಗೋಲ್ಡ್ ಡಿಸ್ಟ್ರಿಕ್ಟ್ ದುಬೈಯನ್ನು ಜಾಗತಿಕ ಚಿನ್ನದ ಕೇಂದ್ರವಾಗಿ ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ.
