ಉದಯವಾಹಿನಿ, ಒಂದು ಕಾಲದಲ್ಲಿ ವೈದ್ಯರಾಗುವ, ಇಂಜಿನಿಯರ್ ಆಗುವ ಕನಸು ಕಂಡ ಅಫ್ಘಾನ್ ಹುಡುಗಿಯರ ಕಣ್ಣುಗಳು ಇಂದು ನಿಶ್ಶಬ್ದವಾಗಿವೆ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯ ಮತ್ತು ಭವಿಷ್ಯ ಎಲ್ಲವೂ ಬಂಧನದಲ್ಲಿದೆ ಎಂದು ಯುನಿಸೆಫ್ ಇತ್ತೀಚಿನ ವರದಿ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಸುಮಾರು 2.2 ಮಿಲಿಯನ್ ಹದಿಹರೆಯದ ಹುಡುಗಿಯರು ಇಂದು ಶಾಲೆ ಹೋಗಲು ಸಾಧ್ಯವಾಗುತ್ತಿಲ್ಲ. ಆರನೇ ತರಗತಿಯ ನಂತರ ಬಾಲಕಿಯರ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಲಕ್ಷಾಂತರ ಹುಡುಗಿಯರ ಪುಸ್ತಕಗಳು ಅಲ್ಲಿ ಮುಚ್ಚಲ್ಪಟ್ಟಿವೆ.
2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ, ಮೊದಲಿಗೆ ತಾತ್ಕಾಲಿಕ ಎಂದು ಹೇಳಿದ ನಿರ್ಬಂಧಗಳು ಶಾಶ್ವತವಾಗಿವೆ. ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶವನ್ನೂ ಸಂಪೂರ್ಣವಾಗಿ ತಡೆಯಲಾಗಿದೆ. ಇದರಿಂದ ಮಹಿಳೆಯರ ಕನಸುಗಳು ಮುರಿದು ಬೀಳುತ್ತಿವೆ.
ಶಿಕ್ಷಣದ ಕೊರತೆಯಿಂದಾಗಿ ಬಾಲ್ಯವಿವಾಹದ ಅಪಾಯವೂ ಹೆಚ್ಚಾಗಿದೆ. ಪೋಷಕರು ಹುಡುಗಿಯರನ್ನು ಹೊರೆ ಎಂದು ಭಾವಿಸಿ, ಚಿಕ್ಕ ವಯಸ್ಸಿನಲ್ಲೇ ಮದುವೆಗೆ ಒತ್ತಾಯಿಸುತ್ತಿದ್ದಾರೆ. ತಾಲಿಬಾನ್ ಕಾನೂನುಗಳ ಪ್ರಕಾರ, ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದೂ ಅಪರಾಧವಾಗಿದೆ.
ಮಹಿಳೆಯರಿಗೆ ಚಿಕಿತ್ಸೆ ನೀಡಲು ಮಹಿಳಾ ವೈದ್ಯರೇ ಬೇಕಾದ ದೇಶದಲ್ಲಿ, ಹುಡುಗಿಯರಿಗೆ ಶಿಕ್ಷಣವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ವೈದ್ಯರು, ದಾದಿಯರು ಎಲ್ಲಿಂದ ಬರುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಮಹಿಳೆಯರ ಶಿಕ್ಷಣ ತಡೆದು ದೇಶದ ಭವಿಷ್ಯವನ್ನೇ ಕೊಲ್ಲಲಾಗುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಅಂತರರಾಷ್ಟ್ರೀಯ ಸಮುದಾಯದ ಒತ್ತಡಕ್ಕೂ ತಾಲಿಬಾನ್ ಸ್ಪಂದಿಸುತ್ತಿಲ್ಲ. ಆದರೆ ಅಫ್ಘಾನಿಸ್ತಾನದಲ್ಲಿ ಪ್ರತಿದಿನ ಲಕ್ಷಾಂತರ ಹುಡುಗಿಯರು ಮೌನವಾಗಿ ಹೋರಾಡುತ್ತಿದ್ದಾರೆ. ಅವರಿಗೆ ಸಹಾನುಭೂತಿ ಅಲ್ಲ, ಶಾಲೆಗೆ ಹೋಗುವ ಮತ್ತು ಮುಕ್ತವಾಗಿ ಬದುಕುವ ಹಕ್ಕು ಬೇಕಾಗಿದೆ. ಜಗತ್ತು ಸ್ಪಂದಿಸದಿದ್ದರೆ ಒಂದು ಇಡೀ ಪೀಳಿಗೆಯೇ ಕತ್ತಲಲ್ಲಿ ಕಳೆದುಹೋಗುವುದು ಖಚಿತ.
