ಉದಯವಾಹಿನಿ,
ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಸಿಸಿಬಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ 7 ದಿನಗಳ ಕಾಲ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಏಳು ದಿನಗಳ ಕಾಲ ತೀವ್ರ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಮತ್ತೊಂದೆಡೆ, ತಲೆಮರೆಸಿಕೊಂಡಿರುವ ಜುನೈದ್ ಹಾಗೂ ಗ್ರೆನೇಡ್ ತಂದುಕೊಟ್ಟ ವ್ಯಕ್ತಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ಕೆಲವರು ಶಂಕಿತರ ಜೊತೆ ಸಂಪರ್ಕದ ಶಂಕೆ ಇದ್ದು ಮತ್ತೆ ಏಳು ದಿನಗಳ ಕಾಲ ಕಸ್ಟಡಿಗೆ ಕೇಳಲು ಸಿಸಿಬಿ ಸಿದ್ದತೆ ನಡೆಸುತ್ತಿದೆ.
ಪ್ರಕರಣದ ಪ್ರಮುಖ ಆರೋಪಿ ಉಗ್ರ ಟಿ.ನಜೀರ್‍ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಕಾರ್ಯಪ್ರವೃತ್ತವಾಗಿದ್ದು, ಜೈಲಿನಲ್ಲಿರುವ ಉಗ್ರ ನಜೀರ್ ವಿಚಾರಣೆ ನಡೆಸಿದರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ. ಪ್ರಕರಣದ ಎರಡನೇ ಆರೋಪಿ ಜುನೈದ್‍ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್‍ವಾಶ್ ಮಾಡಿದ್ದ ನಜೀರ್ 2008ರ ಸರಣಿ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ.
ಈ ನಡುವೆ ಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೇ ಡ್ರಗ್ಸ್ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದುದ್ದಾಗಿ ಶಂಕಿತ ಉಗ್ರ ಮುದಾಸಿರ್ ಪ್ರಿಯತಮೆಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
