ಉದಯವಾಹಿನಿ, ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಹೈಡ್ರಾಮ ಮಾಡಿದ ಖತರ್ನಾಕ್ ಪತಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಬಾಣಸವಾಡಿಯ ಹೆಚ್‍ಆರ್‍ಬಿಆರ್ ಲೇಔಟ್‍ನ ಕೆಂಚಮ್ಮ (19) ಎಂಬುವರು ಆರು ತಿಂಗಳ ಹಿಂದೆಯಷ್ಟೇ ಸಿದ್ದಪ್ಪ ಬಸವರಾಜ್ ಬೆನ್ನೂರು ಜೊತೆ ಮದುವೆಯಾಗಿದ್ದರು.ನಂತರದ ದಿನಗಳಲ್ಲಿ ಇಬ್ಬರ ನಡುವೆ ಕೌಟುಂಬಿಕ ಕಾರಣಗಳಿಗಾಗಿ ಜಗಳ ನಡೆಯುತ್ತಿತ್ತು. ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ದಂಪತಿ ನಡುವೆ ಜಗಳ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ ಪತಿ ಹೈಡ್ರಾಮ ಮಾಡಿದ್ದಾನೆ.
ಕೆಂಚಮ್ಮ ನೇಣುಬಿಗಿದುಕೊಂಡಿದ್ದಾಳೆ ಎಂದು ಸಂಬಂಧಿಕರಿಗೆ ಆರೋಪಿ ಕರೆ ಮಾಡಿದ್ದಾನೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ತೆರಳಿದ ಬಾಣಸವಾಡಿ ಪೊಲೀಸರು ಪರಿಶೀಲನೆ ನಡೆಸಿದಾಗ ಈ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸಿದ್ದಪ್ಪನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
