ಉದಯವಾಹಿನಿ, ಹಾವೇರಿ : ಜಿಲ್ಲಾ ಆಸ್ಪತ್ರೆ ಮೇಲಂತಸ್ತಿನ ಕಾಮಗಾರಿ ವಿಳಂಬದಿಂದಾಗಿ ಆಸ್ಪತ್ರೆಯ ಮಕ್ಕಳ ಹಾಗೂ ತಾಯಂದಿರ ತುರ್ತು ಚಿಕಿತ್ಸಾ ವಾರ್ಡ್ನ ಮಳೆಯಿಂದ ಸೋರುವ ದೃಶ್ಯಕಂಡು ತೀವ್ರ ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಯ ಸಹಾಯಕ ಅಭಿಯಂತರ ಮಂಜುನಾಥ ನಾಯಕ ಅಮಾನತುಗೊಳಿಸಲು ಸೂಚನೆ ನೀಡಿದರು.
ಪ್ರಗತಿ ಪರಿಶೀಲನೆಗಾಗಿ ಹಾವೇರಿಗೆ ಆಗಮಿಸಿದ ಅವರು ಸಭೆಗೂ ಮುನ್ನ ನೇರವಾಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಅವ್ಯವಸ್ಥೆ ಕಂಡು ತೀವ್ರ ಕೋಪದಿಂದ ಅಧಿಕಾರಿಗಳ ಮೇಲೆ ಹರಿಹಾಯ್ದು ಸ್ಥಳದಿಂದಲೇ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರಿಗೆ ಕರೆ ಮಾಡಿ, ಎಂಜಿನಿಯರ್ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಸೂಚಿಸಿದರು.
ಕಟ್ಟಡ ನಿರ್ಮಾಣಕ್ಕೆ ಮುನ್ನ ರೋಗಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡದೆ, ಅವರ ವಾರ್ಡಿನ ಮೇಲ್ಭಾಗ ಹೇಗೆ ಕಟ್ಟಡ ಕಾಮಗಾರಿ ನಡೆಸಿದ್ರಿ? ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ? ನಿಮಗೆ ಮನುಷ್ಯತ್ವ ಇಲ್ವಾ, ಕತ್ತೆ ಕಾಯ್ತಿದ್ದೀರಾ, ಸಂಬಳ ಕೊಟ್ಟಿಲ್ವಾ ಎಂದು ಸ್ಥಳದಲ್ಲೇ ಇದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಎಂಜಿನಿಯರ್‍ನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇನ್ನು ನಾಲ್ಕು ದಿನಗಳಲ್ಲಿ ಮಳೆ ಸೋರಿಕೆ ತಡೆಗಟ್ಟಬೇಕು ಎಂದು ಖಡಕ್ ಸೂಚನೆ ನೀಡಿದರು ಹಾಗೂ ಕಾಮಗಾರಿ ವಿಳಂಬಕ್ಕೆ ಕಾರಣನಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚನೆ ನೀಡಿದರು.
ವಿವಿಧ ವಾರ್ಡ್ಗಳಿಗೆ ಭೇಟಿ- ರೋಗಿಗಳ ವಿಚಾರಣೆ: ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಮಹಿಳಾ ತುರ್ತು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯೋರ್ವರಿಗೆ ಸಕ್ಕರೆ ಕಾಯಿಲೆ ನಿರ್ವಹಣೆ ಕುರಿತಂತೆ ಮಾಹಿತಿ ನೀಡಿ ಗಮನ ಸೆಳೆದರು.
ಸಾರಾಯಿ ಬಂದ್ ಮಾಡಿ: ಆಸ್ಪತ್ರೆಯ ಕಾರಿಡಾರ್‍ನಲ್ಲಿ ನಡೆದುಹೋಗುತ್ತಿರುವ ಮಹಿಳೆಯರ ಗುಂಪು ಸುತ್ತುವರೆದು ಹಳ್ಳಿಗಳಲ್ಲಿ ಸಾರಾಯಿ ಬಂದ್ ಮಾಡಿ, ಸಂಸಾರ ಹಾಳಾಗುತ್ತಿವೆ, ನಿಮಗೆ ಪುಣ್ಯ ಬರುತ್ತದೆ ಎಂದು ಮನವಿ ಮಾಡಿಕೊಂಡರು.
ಮುಗಿಬಿದ್ದ ಜನ: ಮುಖ್ಯಮಂತ್ರಿಗಳು ಅನಿರೀಕ್ಷಿತವಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಜೈಕಾರ ಹಾಕುವುದರ ಮೂಲಕ ಸಂಭ್ರಮ ವ್ಯಕ್ತಪಡಿಸಿದರು
