ಉದಯವಾಹಿನಿ, ಲಕ್ಷ್ಮೇಶ್ವರ: ಕಳೆದ 8-10 ದಿನಗಳಿಂದ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಹುತೇಕ ರಸ್ತೆಗಳು ಹೊಂಡಗಳಾಗಿ ವಾಹನ ಸವಾರರ ಜೀವಕ್ಕೆ ಸಂಚಕಾರ ಉಂಟಾಗುವ ಸಂಭವ ಹೆಚ್ಚಾಗಿದೆ. ಸಮೀಪದ ಶಿಗ್ಲಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಲೋಕೋಪಯೋಗಿ ಇಲಾಖೆಯ ರಸ್ತೆಯು ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ನೀರು ನಿಂತು ರಸ್ತೆಗಳೆಲ್ಲ ಹೊಂಡಗಳಾಗಿ ಮಾರ್ಪಟ್ಟಿರುವುದರಿಂದ ಸಾರ್ವಜನಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಈ ರಸ್ತೆಯ ಮೇಲೆ ಸಂಚಾರ ಮಾಡುವಂತಾಗಿದೆ. ಕಳೆದ ವರ್ಷ ಲೋಕೋಪಯೋಗಿ ಇಲಾಖೆಯು ರಸ್ತೆ ನಿರ್ಮಾಣ ಮಾಡಿದ್ದು ಶಿಗ್ಲಿಯ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಿರುವ ರಸ್ತೆಯು ಸಂಪೂರ್ಣ ಕಿತ್ತು ಹೋಗಿ ಗುಂಡಿಗಳು ಬಿದ್ದರಿಂದ ರಸ್ತೆಯಲ್ಲಿ ನೀರು ನಿಂತು ರಸ್ತೆ ಯಾವುದು ಗುಂಡಿ ಯಾವುದು ಎಂದು ತಿಳಿಯದಾಗಿದ್ದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿ
ದು ಸಂಚಾರ ಮಾಡುವಂತಾಗಿದೆ.
ಆಗ್ರಹ: ಶಿಗ್ಲಿಯ ಬಸ್ ನಿಲ್ಧಾಣದ ಹತ್ತಿರ ರಸ್ತೆಯು ಸಂಪೂರ್ಣ ಕಿತ್ತು ಹೋಗಿ ಮಳೆಯ ನೀರು ನಿಂತು ರಸ್ತೆಗಳು ಹೊಂಡಗಳಾಗಿವೆ. ಚಿಕ್ಕ ಮಕ್ಕಳು, ವಯೋವೃದ್ದರು ಈ ರಸ್ತೆಯ ಮೇಲೆ ಸಂಚಾರ ಮಾಡುವುದು ಅಸಾಧ್ಯವಾಗಿದೆ. ಆದ್ದರಿಂದ ಗ್ರಾಪಂ ಪಿಡಿಓ ಅವರು ರಸ್ತೆಗೆ ಮಣ್ಣು ಹಾಕಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ ಎಂದು ಗ್ರಾಮದ ಸೋಮಣ್ಣ ಡಾಣಗಲ್ಲ ಆಗ್ರಹಿಸಿದ್ದಾರೆ.
