ಉದಯವಾಹಿನಿ, ಶಿವಮೊಗ್ಗ: ಕಳೆದ ಶುಕ್ರವಾರಷ್ಟೇ ಜೈಲಿನಿಂದ ಬಿಡುಗಡೆಯಾಗಿ, ಮತ್ತೆ ಡಕಾಯಿತಿಗೆ ಹೊಂಚು ಹಾಕಿದ್ದ ರೌಡಿಶೀಟರ್ ಕಾಲಿಗೆ ಭದ್ರಾವತಿ ಠಾಣೆ ಪೊಲೀಸರು ಗುಂಡು ಹೊಡೆದಿದ್ದಾರೆ. ಡಿಚ್ಚಿ ಮುಬಾರಕ್ ಎಂಬಾತನೇ ಗುಂಡೇಟು ತಿಂದ ರೌಡಿಶೀಟರ್.
ಭದ್ರಾವತಿ ತಾಲೂಕು ಗೌರಪುರದ ಬಳಿ ಡಿಚ್ಚಿ ಮುಬಾರಕ್ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ. ಈ ಸಂದರ್ಭದಲ್ಲಿ ಭದ್ರಾವತಿ ಪೇಪರ್ ಟೌನ್ ಠಾಣೆಯ ಪಿಎಸ್ಐ ಕೃಷ್ಣಕುಮಾರ್ ಮಾನೆ ಎಂಬವರು ತಮ್ಮ ಸಿಬ್ಬಂದಿಯ ಜೀವ ರಕ್ಷಣೆಗಾಗಿ ರೌಡಿಶೀಟರ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಮುಬಾರಕ್ಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಡಿಚ್ಚಿ ಮುಬಾರಕ್ ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದ ಮರು ದಿನವೇ ತನ್ನ 7-8 ಜನ ಸಂಗಡಿಗರೊಂದಿಗೆ ಸೇರಿ ದರೋಡೆ ಮಾಡಲು ಹೊಂಚು ಹಾಕಿದ್ದ. ಕಾರು ಮತ್ತು ಸ್ಕೂಟಿಯಲ್ಲಿ ಮಾರಕಾಸ್ತ್ರಗಳೊಂದಿಗೆ ಭದ್ರಾವತಿ ತಾಲೂಕು ಶಿವನಿ ಕ್ರಾಸ್ ಗೌರಪುರದ ಬಳಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಬಳಿಕ ಭದ್ರಾವತಿ ಡಿವೈಎಸ್ಪಿ ಅವರು ಸ್ಥಳಕ್ಕೆ ಒಂದು ತಂಡ ರಚನೆ ಮಾಡಿ ಕಳುಹಿಸಿದ್ದರು.
ತಂಡದಲ್ಲಿ ಹೊಸಮನೆ ಪಿಎಸ್ಐ ಸಿದ್ದಪ್ಪ ಎಂ.ಪಿ., ಪೇಪರ್ ಟೌನ್ ಠಾಣೆ ಪಿಎಸ್ಐ ಕೃಷ್ಣಕುಮಾರ್, ನ್ಯೂ ಟೌನ್ ಠಾಣೆ ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಯಾದ ವೆಂಕಟೇಶ್, ಆದರ್ಶ್, ಮಂಜುನಾಥ್, ಚಿನ್ನನಾಯ್ಕ್, ಸುನೀಲ್, ಕಾಂತರಾಜ್, ನಾಗರಾಜ್ ಹಾಗೂ ತೇಜಕುಮಾರ್ ಇದ್ದರು.
