
ಉದಯವಾಹಿನಿ ದೇವದುರ್ಗ: ಕಳೆದ ವಾರಗಳಿಂದ ಬಿಡದೇ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದಾರೆ. ಬಿಟ್ಟೂ ಬಿಟ್ಟೂ ಜಿಟಿ, ಜಿಟಿ ಸುರಿಯುತ್ತಿರುವ ಮಳೆಯಿಂದ ಜನರು ಮನೆ ಬಿಟ್ಟು ಹೊರಗಡೆ ಬರಲಾದಂತ ಪರಿಸ್ಥಿತಿ ಬಂದಾಗಿದೆ. ತೆಗ್ಗುದಿನ್ನಿಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತೆ ಎಂಬಂತಾಗಿದೆ. ಜಾಲಹಳ್ಳಿ, ದೇವದುರ್ಗ, ಗಬ್ಬೂರು, ಅರಕೇರ ಸೇರಿ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಮಳೆಗೆ 16 ಮನೆಗಳು ಭಾಗಶ ಬಿದ್ದಿವೆ. ಕೃಷ್ಣಾನದಿಗೆ ಒಳಹರಿವು ಹೆಚ್ಚಾಗುತ್ತಿದೆ ಎಂದು ತಾಲೂಕ ಆಡಳಿತ ತಿಳಿಸಿದೆ. 20ಕ್ಕೂ ಅಧಿಕ ಕಂಬಗಳು ಬಿದ್ದಿವೆ. ಅಲ್ಲಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಅಲ್ಲಲ್ಲಿ ಕಂಬಗಳು ಬಾಗಿವೆ. ಇನ್ನು ವೈರ್‍ಗಳು ಜೋತು ಬಿದ್ದಿವೆ. ಮಳೆಯಿಂದ ಜೆಸ್ಕಾಂ ಇಲಾಖೆಗೆ 8ರಿಂದ 10 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಪ್ರಭಾರ ಎಇಇ ವೆಂಕಟೇಶ ತಿಳಿಸಿದರು. ಅಂಚೆಕಚೇರಿ, ಶಾಂತಿನಗರ ಸೇರಿ ಇತರೆ ವಾರ್ಡ್‍ನಲ್ಲಿ ಎಲ್ಲೆಂದರಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತ ಪರಿಣಾಮ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ. ಎಪಿಎಂಸಿ ಮಾರ್ಗವಾಗಿ ಗೌತಮ ವಾರ್ಡ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹದಗೆಟ್ಟಿದೆ. ಅಂಚೆ ಕಚೇರಿಯಿಂದ ಅಶೋಕ ವಾರ್ಡ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತೆಗ್ಗುಗಳೇ ಹೆಚ್ಚಿದ್ದು, ಮಳೆಯಿಂದ ತೆಗ್ಗುಗಳಲ್ಲಿ ನೀರು ನಿಂತಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮಾಳಗಡ್ಡೆಯಲ್ಲಿ ಎರಡು ಕಂಬಗಳು ನೆಲಕ್ಕೆ ಬಾಗಿವೆ. ಇಂತಹ ವಾತಾವರಣ ನಿರ್ಮಾಣವಾದ್ದರಿಂದ ನಿವಾಸಿಗಳು ಆತಂಕ ಮಾಡುವಂತಿದೆ. ಪಟ್ಟಣದ ಗೌರಂಪೇಟೆ ವಾರ್ಡ್‍ನಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿ ತೊಡಿರುವ ಗುಡ್ಡಿಗಳು ಕುಸಿದು ಹೋಗುತ್ತಿದೆ. ತೆಗ್ಗು ಪ್ರದೇಶದಲ್ಲಿ ಕೈಗೊಂಡಿರುವ ಸಿಸಿರಸ್ತೆ ಕಾಮಗಾರಿ ಹಿನ್ನೆಲೆ ಮಳೆ ನೀರು ಮನೆಗೆ ನುಗ್ಗುತ್ತಿವೆ. ಮಸರಕಲ್ ಗ್ರಾಮದ ಗಾಂಧಿವೃತ್ತದಲ್ಲಿ ಸಿಸಿರಸ್ತೆ ಸಮತಟ್ಟು ಕಾಮಗಾರಿ ಕೈಗೊಳ್ಳದೇ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆ ಎಲ್ಲೆಂದರಲ್ಲಿ ನೀರು ನಿಂತು ಸಾಂಕ್ರಮಿಕ ರೋಗದ ಭೀತಿ ಎದುರಾಗಿದೆ. ಕಳೆದ ವಾರದಿಂದ ಬಿಟ್ಟೂ ಬಿಟ್ಟೂ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವಸ್ತಗೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದಂತ ಬೆಳೆಗಳು ನಷ್ಟದ ಆತಂಕ ರೈತರನ್ನು ಕಾಡಲಾರಂಭಿಸಿದೆ ಎಂದು ರೈತ ಮುಖಂಡ ಶಿವುಕುಮಾರ ನಗರಗುಂಡ, ಶರಣಪ್ಪ ಕರ್ಕಿಹಳ್ಳಿ ಆಗ್ರಹಿಸಿದರು.
