ಉದಯವಾಹಿನಿ, ಇಂ
ಫಾಲ: ಮಣಿಪುರ ಹಿಂಸಾಚಾರ ಪ್ರಕಣರದಲ್ಲಿ ಸಂತ್ರಸ್ತರ ಕಷ್ಟ, ನೋವುಗಳನ್ನು ಆಲಿಸಿದ ವಿರೋಧ ಪಕ್ಷಗಳ ಮೂತ್ರಿಕೂಟ “ಇಂಡಿಯಾ”ದ ೨೧ ಸದಸ್ಯರು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ. ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ನಿನ್ನೆ ಸಂತ್ರಸ್ತರ ಅಹವಾಲು ಆಲಿಸಿದ್ದ ‘ಇಂಡಿಯಾ’ ಮೈತ್ರಿಕೂಟದ ೨೧ ಸದಸ್ಯರು ಇಂದೂ ಕೂಡ ರಾಜ್ಯದ ವಿವಿಧ ಆಶ್ರಣ ತಾಣದಲ್ಲಿರುವ ನಿರಾಶ್ರಿತರನ್ನು ಭೇಟಿ ಮಾಡಿ ಅವರ ಕಷ್ಟ ಆಲಿಸಿ, ಸಾಂತ್ವಾನ ಹೇಳಿ, ಧೈರ್ಯ ತುಂಬಿದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್, ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ಸಂಸದ ಗೌರವ್ ಗೊಗೊಯ್, ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ೨೧ ಸಂಸದರು ಇಂಫಾಲ್, ಮೊಯಿರಂಗ್, ಚುರಾಚಂದ್‌ಪುರ ಸೇರಿದಂತೆ ಹಲವು ಪ್ರದೇಶಗಳ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು.
ಸಂತ್ರಸ್ತರು ತಾವು ಎದುರಿಸಿದ ಸಮಸ್ಯೆ, ಪಡಪಾಟಲನ್ನು ಪ್ರತಿಪಕ್ಷಗಳ ನಿಯೋಗದ ಜೊತೆ ಹಂಚಿಕೊಂಡಿದ್ದಾರೆ, ಪರಿಸ್ಥಿತಿ ದಾರುಣವಾಗಿರುವುದನ್ನು ಕಂಡು ಮಮ್ಮಲ ಮರುಗಿದ್ದಾರೆ.
ರಾಜ್ಯಪಾಲರಿಗೆ ವರದಿ ಸಲ್ಲಿಕೆ: ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿರುವ “ಇಂಡಿಯಾ” ನಿಯೋಗ, ಅಧ್ಯಯನದ ಬಳಿಕ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಹೇಳಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, “ಇಂಡಿಯಾ ಮೈತ್ರಿಕೂಟ ಮಣಿಪುರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುವ ಏಕೈಕ ನಿಯೋಗ. ಇಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ನಿಯೋಗ ಕರೆದರೆ ನಾವು ಅದರ ಭಾಗಿವಾಗಿರಲು ಸಿದ್ಧವಿದ್ದೇವೆ. ನಾವಿಲ್ಲಿ ರಾಜಕೀಯ ಮಾಡಲು ಬಂದಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ಉದ್ದೇಶ” ಎಂದರು.
