ಉದಯವಾಹಿನಿ,
ಉಡುಪಿ : ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೂತನ ತನಿಖಾಧಿಕಾರಿ ಬೆಳ್ಳಿಯಪ್ಪ ಅವರು ತನಿಖೆಯನ್ನು ತೀವ್ರಗೊಳಿಸಿದ್ದು, ಮೊಬೈಲ್ ದತ್ತಾಂಶಗಳತ್ತ ಎಲ್ಲರ ಕಣ್ಣು ನೆಟ್ಟಿದೆ. ಉಡುಪಿಯ ಪ್ಯಾರಾಮೆಡಿಕಲ್ ಶಿಕ್ಷಣ ಖಾಸಗಿ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಬಗ್ಗೆ ಎಬಿವಿಪಿ ಮತ್ತು ಬಿಜೆಪಿ ಭಾರೀ ಪ್ರತಿಭಟನೆ ನಡೆಸಿದೆ. ತನಿಖಾಕಾರಿಯನ್ನು ಬದಲಾವಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಕಾರಿ ಅಕ್ಷಯ್ ಮಚ್ಚಿಂದ್ರ, ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಜೊತೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತನಿಖಾ ತಂಡ ಈಗಾಗಲೇ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಮುಂದಿನ ಹಂತದಲ್ಲಿ ಮೊಬೈಲ್ನ ದತ್ತಾಂಶಗಳನ್ನು ಆಧರಿಸಿ ವಿಚಾರಣೆ ಮುಂದುವರೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಡಿಯೋ ಪ್ರಕರಣ ಕೇವಲ ಉಡುಪಿಗಷ್ಟೇ ಸೀಮಿತವಾಗದೆ ರಾಜ್ಯಾದ್ಯಂತ ಸೂಕ್ಷ್ಮತೆ ಪಡೆದುಕೊಂಡಿದೆ. ಹಲವಾರು ಕಡೆ ಪ್ರತಿಭಟನೆಗಳಾಗಿವೆ. ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗುತ್ತಿದ್ದು, ವಿವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಲಾಗಿರುವ ಮೊಬೈಲ್ಗಳ ದತ್ತಾಂಶದ ವರದಿ ಬಂದ ನಂತರವೇ ವಿಡಿಯೋ ಚಿತ್ರೀಕರಣದ ಸತ್ಯಾಂಶ ಹೊರಬೀಳಲಿದೆ.
