
ಉದಯವಾಹಿನಿ ರಾಮನಗರ: ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ರಾಮನಗರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ರಾಮನಗರ ಕ್ಷೇತ್ರದ ಶಾಸಕ ಎಚ್. ಎ.ಇಕ್ಬಾಲ್ ಹುಸೇನ್ ನೆರವೇರಿಸಿ ಮಾತನಾಡಿದರು.
ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತೇವೆ. ಸಮಾಜದಲ್ಲಿ ಹಲವರು ಜಗತ್ತಿನಲ್ಲಿ ಜನಿಸುತ್ತಾರೆ ಅವರಲ್ಲಿ ಕೆಲವರು ಇತಿಹಾಸ ಪುಟದಲ್ಲಿ ಅಮರರಾಗಿ ಉಳಿಯುತ್ತಾರೆ. ಅಂತವರಲ್ಲಿ ಮಹಾನ್ ವ್ಯಕ್ತಿ ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ನಂತವರ ಆಚರಣೆ ಮಾಡುತ್ತೇವೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹಗಳನ್ನು ಓದಿದರೆ ಶೋಷಿತ ವರ್ಗದ ಜನರ ಧ್ವನಿಯಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ಗ್ರಂಥದಿಂದ ಎಲ್ಲ ವರ್ಗದ ಜನರು ಶಾಂತಿಯಿಂದ ಬದುಕಲು ಸಾಧ್ಯವಾಗಿದೆ. ಅವರು ವಿದ್ಯೆ, ಸಂಘಟನೆ, ಹೋರಾಟದಂತಹ ಆದರ್ಶ ಗುಣಗಳನ್ನು ನಮಗೆ ನೀಡಿದ್ದಾರೆ. ಸಮಾಜದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾದವರೆಲ್ಲರೂ ಸಹ ಶೋಷಿತರಾಗುತ್ತೀರಿ. ಆ ಮೂಲಕ ನಾವೆಲ್ಲರೂ ಸಹೋದರರಂತೆ ಬದುಕು ನಡಿಸೋಣ, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಉತ್ತಮ ವ್ಯಾಸಾಂಗ ಮಾಡಿ ಎಂದು ಕಿವಿಮಾತು ಹೇಳಿದರು.ನಾನು ಜಿಲ್ಲಾ ಪಂಚಾಯಿತಿ ಅದ್ಯಕ್ಷರಾಗಿದ್ದ ಸಮಯದಲ್ಲಿ ಅರ್ಥಪೂರ್ಣ ಆಚರಣೆ ಮಾಡಿದ್ದನ್ನು ಸ್ಮರಿಸಿದ ಅವರು ಸುಸಜ್ಜಿತ ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾಗಿ ಅಗತ್ಯ ಶೈಕ್ಷಣಿಕ ನೆರವು ನೀಡುತ್ತೇನೆ ಎಂದರು.
ವಿದ್ಯಾರ್ಥಿಗಳು ಪದವಿ ಹಂತಕ್ಕೆ ಸೀಮಿತವಾಗದೆ ಉನ್ನತ ವಿದ್ಯಾಭ್ಯಾಸ ಕೆಎಎಸ್,ಐಎಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುವತ್ತ ಚಿಂತನೆ ನಡೆಸಿ, ನುರಿತ ಉಪನ್ಯಾಸಕರ ಮೂಲಕ ತರಬೇತಿ ಕೇಂದ್ರ ತೆರೆಯಲು ಉದ್ದೇಶಿಸಿದ್ದೇನೆ. ತರಗತಿಗಳಿಗೆ ತೊಂದರೆಯಾಗದಂತೆ ಪ್ರತಿದಿನ ಬೆಳಿಗ್ಗೆ ಮತ್ತುಸಂಜೆ ತರಬೇತಿ ಕೊಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅದ್ಯಾಪಕ ರವಿಕುಮಾರ್ ಕುಡ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿ 2014-15 ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವಾದ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ 9 ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಬೋಧನೆ ಮತ್ತು ವಿಷಯ ಚರ್ಚೆ ಗಳು ನಡೆಯುತ್ತಿವೆ. ಬೋಧನೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಪೂರ್ವ ತರಬೇತಿ ನೀಡಿದ್ದು ಹಲವು ವಿದ್ಯಾರ್ಥಿ ಗಳು ಯಶಸ್ಸು ಕಂಡಿದ್ದಾರೆ. ಹಲವು ರ್ಯಾಂಕ್ ಗಳು ಲಭಿಸಿವೆ. 9.3 ಎಕರೆ ಪ್ರದೇಶ ವಿಶ್ವವಿದ್ಯಾಲಯ ನಿರ್ಮಾಣಕ್ಕೆ 55 ಕೋಟಿಯನ್ನು ಮೀಸಲಿಟ್ಟಿದ್ದು, ಹಲವು ಸ್ವತಂತ್ರ ವಿಶ್ವವಿದ್ಯಾಲಯಕ್ಕೆ ಬೇಕಿರುವ ಸವಲತ್ತುಗಳಿಗೆ ಕುಲ ಸಚಿವರು ಮತ್ತು ಶಾಸಕರು ಸಹಕಾರ ನೀಡುವಂತೆ ಮನವಿ ಮಾಡಿದರು.ವೇದಿಕೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶೇಕ್ ಲತೀಪ್, ಮುಖ್ಯಭಾಷಣ ಕಾರರಾಗಿ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶಿವನಂಕರೀಗೌಡ, ಬೆಂ.ವಿವಿ ಪರಿಶಿಷ್ಟ ಜಾತಿ ಪ.ವರ್ಗ ಘಟಕದ ವಿಶೇಷಾಧಿಕಾರಿ ಡಾ.ಪಿ.ಸಿ.ನಾಗೇಶ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ರಾಮ ಕೃಷ್ಣಯ್ಯ ಇದ್ದರು.
