ಉದಯವಾಹಿನಿ ಕೆ.ಆರ್.ಪೇಟೆ: ಕಳೆದ ಜುಲೈ ೩೦ ರಂದು ಪಟ್ಟಣದ ಹೊರವಲಯದ ಚನ್ನರಾಯಪಟ್ಟಣ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಒಣಗಿದ ಮರಗಳು ಹಾಗೂ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಬೃಹತ್ ಮಾವಿನಮರವನ್ನು ತೆರವುಗೊಳಿಸುವಂತೆ ಉದಯವಾಹಿನಿ ದಿನಪತ್ರಿಕೆ ವರದಿ ಮಾಡಿತ್ತು. ವರದಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಗಂಗಾಧರ್ ಜಿಲ್ಲಾ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಕೇವಲ ನಾಲ್ಕು ದಿನಗಳಲ್ಲಿಯೇ ಅಪಾಯಕಾರಿಯಾಗಿದ್ದ ಮರವನ್ನು ತೆರವುಗೊಳಿಸಿದ್ದಾರೆ. ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿಗಳು, ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಆಗಲೋ ಈಗಲೋ ಮುರಿದು ರಾಜ್ಯ ಹೆದ್ದಾರಿಗೆ ಬೀಳುವಂತಿದ್ದ ಬೃಹತ್ ಮಾವಿನ ಮರವನ್ನು ಕಾಯಾಚರಣೆ ಮಾಡುವ ಮೂಲಕ ತೆರವುಗೊಳಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಇದಕ್ಕಾಗಿ ವಲಯ ಅರಣ್ಯಾಧಿಕಾರಿ ಗಂಗಾಧರ್‌ರವರಿಗೆ ಪಟ್ಟಣದ ನಾಗರೀಕರು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್, ಉಪಾದ್ಯಕ್ಷ ನಾಗರಾಜು, ಮತ್ತು ಪದಾಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಉದಯವಾಹಿನಿ ವರದಿಯ ಫಲಶೃತಿ.ಉದಯವಾಹಿನಿ ಪತ್ರಿಕೆಯ ವರದಿ ನೋಡಿ ಎಚ್ಚೆತ್ತು ಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಬೃಹತ್ ಮಾವಿನ ಮರವನ್ನು ತೆರವುಗೊಳಿಸಿದರು.
