ಉದಯವಾಹಿನಿ, ಟೋಕಿಯೋ: ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ಕೇವಲ ಉದ್ಯಮ ಮತ್ತು ಶಿಕ್ಷಣಕ್ಕೆ ಸೀಮಿತವಾಗಿಲ್ಲ, ಈಗ ಅದು ಆಧ್ಯಾತ್ಮಿಕ ಲೋಕಕ್ಕೂ ಕಾಲಿಟ್ಟಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ಈಗ ‘ರೋಬೋಟ್ ಸನ್ಯಾಸಿಗಳು’ ಧರ್ಮ ಬೋಧನೆ ಮಾಡುತ್ತಿದ್ದು, ಭವಿಷ್ಯದಲ್ಲಿ ರೋಬೋಟ್‌ಗಳೇ ಧಾರ್ಮಿಕ ಗುರುಗಳಾಗಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.ದಕ್ಷಿಣ ಕೊರಿಯಾದಲ್ಲಿ ‘ಗಾಬಿ’ ಎಂಬ ಎಐ ಸನ್ಯಾಸಿ:
ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿರುವ ಪ್ರಸಿದ್ಧ ‘ಜೋಗ್ಯೆಸಾ’ ದೇಗುಲದಲ್ಲಿ ‘ಗಾಬಿ’ (Gabi) ಎಂಬ ರೋಬೋಟ್ ಸನ್ಯಾಸಿಯನ್ನು ಪರಿಚಯಿಸಲಾಗಿದೆ. 130 ಸೆಂಟಿಮೀಟರ್ ಎತ್ತರವಿರುವ ಈ ರೋಬೋಟ್, ಸಾಂಪ್ರದಾಯಿಕ ಬೌದ್ಧ ಉಡುಪನ್ನು ಧರಿಸಿ, ಬೌದ್ಧ ದೀಕ್ಷೆಯನ್ನೂ ಸ್ವೀಕರಿಸಿದೆ. ಅಷ್ಟೇ ಅಲ್ಲದೆ, “ನಾನು ಬೌದ್ಧ ಧರ್ಮಕ್ಕೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿದೆ.
ಜಪಾನ್‌ನ 400 ವರ್ಷ ಹಳೆಯ ದೇವಸ್ಥಾನದಲ್ಲಿ ರೋಬೋಟ್ ಉಪದೇಶ:
ಜಪಾನ್‌ನ ಕ್ಯೋಟೋದಲ್ಲಿರುವ 400 ವರ್ಷಗಳ ಇತಿಹಾಸವಿರುವ ಕೊಡೈ-ಜಿ ದೇಗುಲದಲ್ಲಿ ‘ಕಾನನ್’ (Kannon) ಎಂಬ ರೋಬೋಟ್ ಅನ್ನು ಸ್ಥಾಪಿಸಲಾಗಿದೆ. ಯುವ ಪೀಳಿಗೆಯನ್ನು ಆಧ್ಯಾತ್ಮದತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ರೋಬೋಟ್ ಜಪಾನಿ ಭಾಷೆಯಲ್ಲಿ ಬೌದ್ಧ ಧರ್ಮದ ತತ್ವಗಳನ್ನು ಬೋಧಿಸುತ್ತದೆ ಮತ್ತು ಅದನ್ನು ಇಂಗ್ಲಿಷ್ ಹಾಗೂ ಚೈನೀಸ್ ಭಾಷೆಗಳಿಗೂ ಭಾಷಾಂತರಿಸುವ ಸಾಮರ್ಥ್ಯ ಹೊಂದಿದೆ.
