ಉದಯವಾಹಿನಿ, ಗುವಾಹಟಿ (ಅಸ್ಸೋಂ): ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಗುರುವಾರ ಸತತ ಎರಡನೇ ದಿನವೂ ಅಸ್ಸೋಂ ಪೊಲೀಸ್ ಅಪರಾಧ ವಿಭಾಗದ ಮುಂದೆ ಹಾಜರಾದರು.
ಸಿಎಂ ಪತ್ನಿ ರಿನಿಕಿ ಅವರು ಬಹು ರಾಷ್ಟ್ರಗಳ ಪಾಸ್‌ಪೋರ್ಟ್‌ಗಳು ಮತ್ತು ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಖೇರಾ ಆರೋಪಿಸಿದ್ದರು. ಈ ಆರೋಪವನ್ನು ಸಾಬೀತು ಮಾಡಲು ಸೂಚಿಸಿ, ಸಿಎಂ ಪತ್ನಿ ರಿನಿಕಿ ಅವರು ಪ್ರಕರಣ ದಾಖಲಿಸಿದ್ದಾರೆ.

ಅಸ್ಸೋಂ ಪೊಲೀಸರು ನಿನ್ನೆ(ಬುಧವಾರ) ಖೇರಾ ಅವರನ್ನು 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು. ಇಂದು ಮತ್ತೆ ಹಾಜರಾಗುವಂತೆ ಸೂಚಿಸಿದ್ದರು. ಇಂದು ಎಷ್ಟು ತಾಸು ವಿಚಾರಣೆ ನಡೆಸಲಾಗಿದೆ ಎಂಬುದು ತಿಳಿದುಬಂದಿಲ್ಲ. ನಾನು ತನಿಖೆಗಳಿಗೆ ಸಹಕರಿಸುತ್ತಿದ್ದೇನೆ. ಇಂದು ಕೂಡ ಹಾಜರಾಗುತ್ತೇನೆ” ಎಂದು ಕಾಂಗ್ರೆಸ್ ವಕ್ತಾರ ವಿಚಾರಣೆಗೂ ಮೊದಲು ಮಾಧ್ಯಮಗಳಿಗೆ ತಿಳಿಸಿದ್ದರು.ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಖೇರಾ, “ನಾನು ಕಾನೂನು ಪಾಲಿಸುವ ವ್ಯಕ್ತಿ. ಸಂವಿಧಾನದ ಪ್ರಕಾರ ವಿಚಾರಣೆಗೆ ಸಹಕರಿಸುವುದು ನನ್ನ ಕರ್ತವ್ಯ ಮತ್ತು ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಬುಧವಾರ ರಾತ್ರಿ ತನಿಖೆಯ ಬಳಿಕ ಹೊರಬಂದಾಗ ಹೇಳಿದ್ದರು.
ಖೇರಾ ನೀಡಿದ ದಾಖಲೆ ನಕಲಿ-ಸಿಎಂ ಹಿಮಂತ್​: ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಖೇರಾ ಅವರು ನೀಡಿರುವ ದಾಖಲೆಗಳು ನಕಲಿ ಎಂದು ಕೇಂದ್ರ ಸರ್ಕಾರ ಲಿಖಿತವಾಗಿ ದೃಢೀಕರಿಸಿದೆ. ಆದ್ದರಿಂದ, ಪೊಲೀಸ್ ತನಿಖೆಗಳು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಗದಿತ ಸಮಯದೊಳಗೆ ಅವರು ಆರೋಪಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಶರ್ಮಾ ಅವರ ಪತ್ನಿ ಖೇರಾ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ನಿಬಂಧನೆಗಳ ಅಡಿಯಲ್ಲಿ ಗುವಾಹಟಿ ಅಪರಾಧ ಶಾಖೆಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರುಗಳನ್ನು ದಾಖಲಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ, ವಂಚನೆ, ನಕಲಿ ದಾಖಲೆಗಳ ಸೃಷ್ಟಿ, ಶಾಂತಿ ಭಂಗಕ್ಕೆ ಪ್ರಚೋದನೆ, ಉದ್ದೇಶಪೂರ್ವಕ ಅವಮಾನ ಮತ್ತು ಮಾನಹಾನಿ ಆರೋಪಗಳ ಮೇಲೆ ದೂರು ದಾಖಲಿಸಲಾಗಿದೆ.ಹೈಕೋರ್ಟ್​ನಿಂದ ಜಾಮೀನು ಪಡೆದಿದ್ದ ಖೇರಾ: ಇದಕ್ಕೂ ಮೊದಲು ಕಾಂಗ್ರೆಸ್​ ವಕ್ತಾರ, ತೆಲಂಗಾಣ ಹೈಕೋರ್ಟ್​​ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದರ ವಿರುದ್ಧ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಜಾಮೀನು ಆದೇಶವನ್ನು ತಡೆಹಿಡಿದು ಖೇರಾ ಅವರನ್ನು ಗುವಾಹಟಿ ಹೈಕೋರ್ಟ್‌ಗೆ ಸಂಪರ್ಕಿಸಲು ನಿರ್ದೇಶಿಸಿತು.ತರುವಾಯ, ಗುವಾಹಟಿ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಇದರ ವಿರುದ್ಧ ಕಾಂಗ್ರೆಸ್​ ವಕ್ತಾರ ಮತ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದರು. ಇದು ರಾಜಕೀಯ ದ್ವೇಷದಿಂದ ಕೂಡಿದಂತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!