ಉದಯವಾಹಿನಿ ಮುದ್ದೇಬಿಹಾಳ : ಚಿಮ್ಮಲಗಿ ಏತ ನೀರಾವರಿ ಎಡದಂಡೆ ಕಾಲುವೆಗಾಗಿ ಜಮೀನು ಕಳೆದುಕೊಂಡ ತಾಲೂಕಿನ ಸಿದ್ದಾಪೂರ ಪಿ.ಟಿ ಸಂತ್ರಸ್ಥ ರೈತರು ಮೂರು ದಿನಗಳಿಂದ ಕಾಲುವೆಗೆ ಮಣ್ಣು ಹಾಕಿ ನೀರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕೆಬಿಜೆಎನ್‌ಎಲ್ ಭೂಸ್ವಾಧೀನ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೋಮವಾರ ಭೇಟಿ ನೀಡಿ ರೈತರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ ರೈತರು ಹೋರಾಟವನ್ನು ಅಂತ್ಯಗೊಳಿಸಿದರು. ಮೂರನೇ ದಿನಕ್ಕೆ ಕಾಲಿಟ್ಟಿದ್ದ ರೈತರ ಹೋರಾಟದ ಸ್ಥಳಕ್ಕೆ ಕೆಬಿಜೆಎನ್‌ಎಲ್ ಇಇ ಆರ್.ಎಲ್.ಹಳ್ಳೂರ,ಎಇಇ ಅಬೂಬಕರ್ ಬಾಗವಾನ,ಅಶೋಕ ಬಿರಾದಾರ,ಸುನೀಲಕುಮಾರ ಮೊದಲಾದವರು ಹಿರಿಯ ಅಧಿಕಾರಿಗಳೊಂದಿಗೆ ರೈತರ ಮನವೊಲಿಸುವುದಕ್ಕೆ ಮುಂದಾದರು. ಹೋರಾಟದ ನೇತೃತ್ವ ವಹಿಸಿದ್ದ ಯುವ ಮುಖಂಡ ಗುರು ರಾಯಗೊಂಡ, ಕಳೆದ ಹನ್ನೆರಡು ವರ್ಷಗಳಿಂದ ನಮಗೆ ಜಮೀನು ಕಳೆದುಕೊಂಡಿದ್ದರೂ ಪರಿಹಾರ ಬಂದಿಲ್ಲ.ಆಲಮಟ್ಟಿ ಎಸ್‌ಎಲ್‌ಓ ಅಧಿಕಾರಿ ಶಿವಾನಂದ ಸಾಗರ ಅವರನ್ನು ವಿಚಾರಿಸಲು ಹೋದರೆ ರೈತರೊಂದಿಗೆ ಉಡಾಫೆಯಿಂದ ಮಾತನಾಡುತ್ತಾರೆ.ನಮ್ಮ ಜಮೀನು ಕಳೆದುಕೊಂಡಿದ್ದಕ್ಕೆ ದಾಖಲೆಗಳೇ ಇಲ್ಲವೆಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.ಬಾಗಲಕೋಟೆಯ ಕೆಬಿಜೆಎನ್‌ಎಲ್ ಭೂಸ್ವಾಧೀನ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ರೈತರ ಸಮಸ್ಯೆಯನ್ನು ಆಲಿಸಿ ಮಾತನಾಡಿ ಪರಿಹಾರಕ್ಕೆ ಆದೇಶ ಇರದ 18 ರೈತರಿಗೆ ಸೇರಿದಂತೆ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆಯ ಹೆಚ್ಚುವರಿ ಕ್ಷೇತ್ರದ 0.484 ದಿಂದ 2.193 ಕಿಮೀ ವರೆಗಿನ ಜಮೀನು ಕಳೆದುಕೊಂಡ ಸಂತ್ರಸ್ಥ ರೈತರಿಗೆ ಒಣಬೇಸಾಯ ಜಮೀನಿಗೆ ಎಕರೆಗೆ 20 ಲಕ್ಷ ರೂ ಹಾಗೂ ನೀರಾವರಿ ಎಕರೆ ಜಮೀನಿಗೆ 24 ಲಕ್ಷ ರೂ ಪರಿಹಾರ ಬರುತ್ತದೆ.ಅದು ಒಪ್ಪಿತ ನಿಯಮದಂತೆ ನಡೆದುಕೊಳ್ಳುವುದಾದರೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡುತ್ತೇವೆ. ಸಿದ್ದಾಪುರ ಪಿಟಿ ಗ್ರಾಮದ ರೈತರಿಗೆ ಪರಿಹಾರವನ್ನು ಒದಗಿಸಲು 3 ಕೋಟಿ ರೂ. ಠೇವಣಿ ಇಡುವಂತೆ ಕೆಬಿಜೆಎನ್‌ಎಲ್ ಎಂಡಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಬಳಿಕ ಕೆಬಿಜೆಎನ್‌ಎಲ್ ಇಇ ಆರ್.ಎಲ್.ಹಳ್ಳೂರ ಸಹಿ ಮಾಡಿದ ಲಿಖಿತ ಪತ್ರ ನೀಡಿ ಆರು ತಿಂಗಳಲ್ಲಿ ರೈತರಿಗೆ ಪರಿಹಾರದ ಹಣ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಹೋರಾಟ ಅಂತ್ಯಗೊಳಿಸಲಾಯಿತು. ಸಂತ್ರಸ್ತರ ರೈತರಾದ ವಿಠ್ಠಲ ಹಾಲ್ಯಾಳ,ಶಾಂತಪ್ಪ ಬ್ಯಾಕೋಡ,ಗುರುಸಿದ್ದಪ್ಪ ಗೋಡಿಕಾರ,ಸಿದ್ದಪ್ಪ ಸೋಮನಾಳ,ಶಿವಾನಂದ ಬಾಗೇವಾಡಿ ಮೊದಲಾದವರು ಇದ್ದರು.ಪಿಎಸೈ ಆರೀಫ ಮುಶಾಪುರಿ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.ಎಸ್‌ಎಲ್‌ಓ ಕಚೇರಿ ಭೂಮಾಪಕರಾದ ಕವನ್ ಕುಲಕರ್ಣಿ,ಸಮೀರ್ ಪಠಾಣ ಹಾಜರಿದ್ದರು
ಕಣಕಾಲ,ಆರೇಶಂಕರ ಗ್ರಾಮಗಳಿಗೆ ನೀರಿನ ಸಮಸ್ಯೆ ಉಲ್ಬಣ: ಮೂರು ದಿನಗಳಿಂದ ಕಾಲುವೆ ನೀರು ಬಂದ್ ಮಾಡಿದ್ದರಿಂದ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ,ಆರೇಶಂಕರ ಕೆರೆಗೆ ನೀರು ಭರ್ತಿ ಮಾಡುವುದಕ್ಕೆ ಆಗಿರಲಿಲ್ಲ.ಅಲ್ಲದೇ ಬಹುಹಳ್ಳಿ ಕುಡಿವ ನೀರಿನ ಯೋಜನೆಯೂ ಇದೇ ಕಾಲುವೆ ಅಡಿ ಬರುತ್ತಿರುವುದರಿಂದ ಅಲ್ಲೂ ಸಮಸ್ಯೆ ಉದ್ಭವವಾಗಿತ್ತು.ಬಸವನ ಬಾಗೇವಾಡಿ ಆರ್ ಡಬ್ಲೂ ಎಸ್ ಎಇ ಶ್ರೀಶೈಲ್ ಗೌಡರ,ಬಸವರಾಜ ಚಿಕ್ಕಸಂಶಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿರುವುದು ಕಂಡು ಬಂದಿತು.
ಮಣ್ಣು ತೆರವು ರಾತ್ರಿಯಿಂದಲೇ ನೀರು ಹರಿಸುವಿಕೆಗೆ ಚಾಲನೆ: ಕೆಬಿಜೆಎನ್‌ಎಲ್ ಎಇಇ ಅಬೂಬಕರ್ ಬಾಗವಾನ, ಸೋಮವಾರ ರಾತ್ರಿಯಿಂದಲೇ ಕಾಲುವೆಗೆ ಅಡ್ಡಲಾಗಿ ಹಾಕಿರುವ ಮಣ್ಣು ತೆರವುಗೊಳಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು
.
