ಉದಯವಾಹಿನಿ ಸಿರುಗುಪ್ಪ : ಒಂದು ಕಡೆ ತುಂಗಾಭದ್ರ ನದಿ ಇನ್ನೊಂದೆಡೆ ವೇದಾವತಿ(ಹಗರಿ) ನದಿ, ಮದ್ಯದಲ್ಲಿ ಕಾಲುವೆಗಳು, ಬೋರ್‌ವೆಲ್‌ಗಳ ಸಹಾಯದಿಂದ ಇಡೀ ರಾಜ್ಯಕ್ಕೆ ಅನ್ನ ಪೂರೈಸುವ ಭತ್ತದ ನಾಡೆಂದು ಪ್ರಖ್ಯಾತಿ ತಾಲೂಕಿನಲ್ಲಿ ವರುಣನ ಅವಕೃಪೆಯಿಂದ ಬರದ ಛಾಯೆ ಎದ್ದು ಕಾಣುತ್ತಿದೆ.
ನಾಟಿಗಾಗಿ ಬೆಳಸಲಾದ ಭತ್ತದ ಸಸಿ ನೀರಿಲ್ಲದೇ ಒಣಗುತ್ತಿರುವುದರಿಂದ ಸಂಕಷ್ಟಗೊಳಗಾದ ರೈತ ಕುರಿ, ಮೇಕೆ ಮೇಯಿಸುತ್ತಿರುವ ದೃಶ್ಯ ತಾಲೂಕಿನ ಬಗ್ಗೂರು ಗ್ರಾಮದ ಜಮೀನಿನಲ್ಲಿ ಕಂಡುಬAದಿತು.
ಮುಂದಿನ ದಿನಗಳಲ್ಲಾದರೂ ಉತ್ತಮ ಮಳೆಯಾಗಿ ನದಿಯಲ್ಲಿ ನೀರು ಹರಿಯಲಿದೆಂಬ ಭರವಸೆಯಿಂದ ವೇದಾವತಿ(ಹಗರಿ) ನದಿಪಾತ್ರದಲ್ಲಿರುವ ಜಮೀನಿನಲ್ಲಿ ಮರಿಸ್ವಾಮಿ ಎಂಬ ರೈತ ತನ್ನ ೧೫ ಎಕರೆಗಾಗುವಷ್ಟು ಭತ್ತದ ಬೀಜಗಳನ್ನು ಖರೀದಿಸಿ ಸಸಿಮಡಿಯನ್ನು ಹಾಕಿದ್ದಾನೆ.ಆದರೆ ಮುನಿಸುಗೊಂಡ ವರುಣದೇವನಿಂದ ನದಿಯಲ್ಲಿ ನೀರು ಬತ್ತಿಹೋಗಿದ್ದು ೫೦ದಿನಗೊಳಗಾಗಿ ನಾಟಿ ಮಾಡಬೇಕಿದ್ದ ಸಸಿ ೮೦ ದಿನಗಳಾಗಿ ಅವಧಿ ಮೀರಿದೆ ಅಲ್ಲದೇ ಸಸಿಗೂ ನೀರಿಲ್ಲದಂತಾಗಿರುವುದನ್ನು ಕಂಡು ಕಂಗಾಲಾಗಿರುವ ಅನ್ನದಾತ ಕೊನೆಗೆ ಕುರಿ ಮತ್ತು ಮೇಕೆಗಳಿಗೆ ಆಹಾರವಾದರೂ ದೊರೆಯಲೆಂಬ ಆಶಾಭಾವನೆಯಿಂದ ಜಮೀನಿನಲ್ಲಿನ ಭತ್ತದ ಸಸಿಯನ್ನು ಕುರಿ ಮೇಯಿಸಲ್ಲಿಕ್ಕೆ ಕುರಿಗಾಯಿಗಳಿಗೆ ಅನುಮತಿ ನೀಡಿದ್ದಾನೆ. ಇದರಿಂದಾಗಿ ಸುಮಾರು ೨೦ ಸಾವಿರ ರೂಪಾಯಿಯಷ್ಟು ನಷ್ಟವಾಗಿದೆ ಏನು ಮಾಡೋದು ಸಾರ್ ಪ್ರತಿವರ್ಷ ಜೂನ್ ಇಲ್ಲವೇ ಜುಲೈ ೧೦ರೊಳಗಾಗಿ ನಾಟಿ ಮಾಡಲಾಗುತ್ತಿತ್ತು. ಈ ಸಲ ಆಗಷ್ಟ್ ೧೦ ಮೀರಿದರೂ ನದಿಗೆ ನೀರಿಲ್ಲದೇ ಏನು ಮಾಡುವುದೋ ತೋಚದಂತಾಗಿದೆ. ಮುಂದಿನ ದಿನಗಳಲ್ಲಿ ಹಿಂಗಾರು ಬಿತ್ತನೆಯಲ್ಲಾದರೂ ಉತ್ತಮ ಮಳೆಯಾದರೆ ಸಜ್ಜೆ, ಜೋಳದಂತಹ ಬೆಳೆಯನ್ನು ನಾಟಿ ಮಾಡಬೇಕಷ್ಟೇ ಎಂದು ರೈತ ಮರಿಸ್ವಾಮಿ ಅಳಲನ್ನು ತೋಡಿಕೊಂಡರು.
