
ಉದಯವಾಹಿನಿ ಕುಶಾಲನಗರ: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾದ ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಉತ್ತಮ ನಾಯಕತ್ವ, ವ್ಯಕ್ತಿತ್ವ ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಕರೆ ನೀಡಿದರು. ಪ್ರತಿಯೊಬ್ಬರಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಗುರುವಾರ ( ಆ.10 ರಂದು ) ಆರಂಭಿಸಲಾದ ಕುಶಾಲನಗರ ಪ್ರೌಢಶಾಲಾ ‘ಬಿ’ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡೆಗಳು ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ ಬೆಳೆಸಲು ನೆರವಾಗಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ಕ್ರೀಡಾಳುಗಳು ಸೋಲು-ಗೆಲವಿನ ಕಡೆಗೆ ಗಮನ ಕೊಡದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ಭವಿಷ್ಯದಲ್ಲಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಅಂಜೆಲಾ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ವಿಜಯ ಕ್ಯಾಸ್ಟಲೋನೋ ಮಾತನಾಡಿ,ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪರಸ್ಪರ ಪ್ರೀತಿ- ವಿಶ್ವಾಸ ಸಹಕಾರ ಮನೋಭಾವನೆ ಬೆಳೆಯುತ್ತದೆಎಂದರು.
ಕ್ರೀಡಾಕೂಟದ ಸಂಚಾಲಕ ಎ.ಎ.ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಜೆಲಾ ವಿದ್ಯಾಸಂಸ್ಥೆ ವತಿಯಿಂದ ಕ್ರೀಡಾಕೂಟವನ್ನು ಉತ್ತಮವಾಗಿ ಸಂಘಟಿಸಿರುವ ಬಗ್ಗೆ ಶ್ಲಾಘಿಸಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕುಶಾಲನಗರ ಫಾತಿಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿ’ಸಿಲ್ವ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ಎಲ್. ಸುಕುಮಾರಿ,
ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಸಿ ಆರ್ ಪಿ ಕೆ.ಶಾಂತಕುಮಾರ್, ಅಂಜೆಲಾ
ಶಾಲೆಯ ಸಂಚಾಲಕಿ ಲೀನಾ ಫರ್ನಾಂಡೀಸ್, ಮುಖ್ಯಸ್ಥೆ ರೇಖಾ ಫರ್ನಾಂಡೀಸ್ , ಶಿರಂಗಾಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಸ್ಥ ಆರ್.ಡಿ.ಲೋಕೇಶ್, ಸ್ಥಳೀಯ ಸರ್ಕಾರಿ ಪಿಯೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ದಾನಿ ಸತೀಶ್, ಕ್ರೀಡಾಕೂಟದ ಸಂಘಟಕ ಶಿಕ್ಷಕ ಎಂ.ನೀಲಪ್ಪ, ವಿವಿಧ ಪ್ರೌಢಶಾಲಾ ಮುಖ್ಯಸ್ಥರು, ದೈಹಿಕ ಶಿಕ್ಷಣ ಶಿಕ್ಷಕರು, ಶಾಲಾ ತಂಡಗಳ ವ್ಯವಸ್ಥಾಪಕರು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.ಶಿಕ್ಷಕಿ ಸಿ.ರೇಖಾ ನಿರ್ವಹಿಸಿದರು. ಶಿಕ್ಷಕಿ ಪಿ.ಪಿ.ವನಿತ ಸ್ವಾಗತಿಸಿದರು. ಡಿ.ಎಂ.ನೇತ್ರಾವತಿವಂದಿಸಿದರು.ಇದಕ್ಕೂ ಮೊದಲು ಬಿಇಓ ಕೆ.ವಿ.ಸುರೇಶ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಮಕ್ಕಳ ಪಥ ಸಂಚಲನವು ಆಕರ್ಷಣೀಯವಾಗಿತ್ತು. ನಂತರ ಮಕ್ಕಳಿಗೆ, ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಬ್ಯಾಡ್ ಮಿಂಟನ್ ಇನ್ನಿತರ ಪಂದ್ಯಾಟಗಳು ಜರುಗಿದವು.
