ಉದಯವಾಹಿನಿ,ನಾಗಮಂಗಲ : ದೇಶವನ್ನು ಗೌರವಿಸುವ, ಮಾತಾ – ಪಿತೃಗಳನ್ನು ಪೂಜಿಸುವ ವ್ಯಕ್ತಿ ಎಲ್ಲೆಡೆಯೂ ಮನ್ನಣೆಗೆ ಪಾತ್ರರಾಗುತ್ತಾನೆ ಎಂದು ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ನುಡಿದರು.ಅವರಿಂದು ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು. ವಿದೇಶಿ ಸಾಹಿತಿಯ ಸಾಲುಗಳನ್ನು ಉಲ್ಲೇಖಿಸಿ, ಭಾರತವು ಮಾತೃ ಪ್ರೇಮದ ಐತಿಹಾಸಿಕ ಜನ್ಮಸ್ಥಳ ಎಂದು ಬಣ್ಣಿಸಿದರು. ಬ್ರಿಟಿಷರಿಂದ ಭೌಗೋಳಿಕವಾಗಿ ಮಾತ್ರವಲ್ಲ ಅಜ್ಞಾನ ಮುಕ್ತ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದ ನಾವು ದೇಶವನ್ನು ಕಾಯುತ್ತಿರುವ ಯೋಧರು ಹಾಗೂ ಅನ್ನ ನೀಡುತ್ತಿರುವ ರೈತರನ್ನೂ ಸ್ಮರಿಸಿ ಗೌರವಿಸುವ ಕಾಯಕ ವಾಗಬೇಕಿದೆ. ಅಂದು ವಿದೇಶಿಗರೂ ಶಿಕ್ಷಣ ಅರಸಿ ಬರುತ್ತಿದ್ದ ನಳಂದ, ತಕ್ಷಶಿಲಾ ದಂತಹ ವಿಶ್ವವಿದ್ಯಾಲಯಗಳು ಮತ್ತೆ ಸ್ಥಾಪನೆಗೊಂಡು ಇತಿಹಾಸದ ವೈಭವವನ್ನು ಮರುಕಳಿಸಿವೆ. ಜ್ಞಾನ ವಿಜ್ಞಾನ ತಂತ್ರಜ್ಞಾನ ಯುಗದ ಭವ್ಯ ಪ್ರಜೆಗಳಾದ ನೀವು ಭಾರತ ಪ್ರಗತಿಯ ಹಿರಿಮೆಯನ್ನು ಎತ್ತಿ ಹಿಡಿಯಿರಿ ಎಂದು ಆಶೀರ್ವದಿಸಿದರು.
ಸೈನಿಕ ಸನ್ಮಾನ ಸ್ವೀಕರಿಸಿದ ಮುಖ್ಯ ಅತಿಥಿ, ಭಾರತೀಯ ವಾಯುಪಡೆಯ ಶಿಕ್ಷಣ ವಿಭಾಗದ ನಿವೃತ್ತ ಉಪನಿರ್ದೇಶಕ ಹಾಗೂ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಅನೂಪ್ ಕುಮಾರ್ ವರ್ಶ್ನೇಯ ಮಾತನಾಡಿ, ಅಂದಿನ ರಾಷ್ಟ್ರಪ್ರೇಮಿ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನದ ಫಲವಾಗಿ ಬ್ರಿಟಿಷರ ಮುಷ್ಟಿಯಿಂದ ಮುಕ್ತಗೊಂಡ ಭಾರತಮಾತೆ ಪುನರ್ಜನ್ಮ ತಾಳಿದಳು. ಇಂದು ಭಾರತ ವಿವಿಧ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆಗಳ ವಿಶೇಷ ಮೈಲಿಗಲ್ಲನ್ನು ನಿರ್ಮಿಸಿದೆ ಎಂದು ಅಭಿಪ್ರಾಯಪಟ್ಟರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಂ ಎ ಶೇಖರ್ ಸ್ವಾತಂತ್ರ್ಯೋತ್ಸವದ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಹಾದ್ವಾರದಲ್ಲಿರುವ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಮುನ್ನಡೆದ ಕುಲಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಯವರು ತೆರೆದ ಜೀಪಿನಲ್ಲಿ, ಇಕ್ಕೆಲಗಳಲ್ಲೂ ಬಿಳಿ ಕುದುರೆಗಳು, ಸ್ವಾತಂತ್ರ್ಯ ಸೇನಾನಿಗಳ ಛದ್ಮವೇಷ, ವೀರಗಾಸೆ, ಯಕ್ಷಗಾನ ಕಲಾವಿದರು, ಎನ್ ಸಿ ಸಿ ದಳದ ಸಾಂಗತ್ಯ ಹಾಗೂ ಮೊಳಗುತ್ತಿದ್ದ ಸ್ವಾತಂತ್ರ್ಯ ಘೋಷಗಳ ನಡುವೆ ಕ್ರೀಡಾಂಗಣದ ಮುಖ್ಯ ವೇದಿಕೆಯ ವರೆಗೂ ನಡೆದ ಪೆರೇಡ್ ರಾಜಧಾನಿಯ ಸ್ವಾತಂತ್ರ್ಯ ವೈಭವವನ್ನು ನೆನಪಿಸುವಂತಿತ್ತು.
ಧ್ವಜಾರೋಹಣದ ಬಳಿಕ ಸ್ವಾತಂತ್ರ್ಯದ ಸಂಕೇತವಾಗಿ 77 ಪಾರಿವಾಳಗಳು ಹಾಗೂ 770 ತ್ರಿವರ್ಣ ಬಲೂನ್ ಗಳನ್ನು ಹಾರಿಸಲಾಯಿತು.
ವಿಶ್ವವಿದ್ಯಾಲಯದ ಸಾಂಸ್ಥಿಕ ಶಾಲಾ-ಕಾಲೇಜುಗಳ 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿಪಾಲ್ಗೊಂಡರು.ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವ ನೃತ್ಯ ವೈಭವ ಜರುಗಿದವು. ಈ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಸಿ ಕೆ ಸುಬ್ಬರಾಯ, ಡಾ. ಪ್ರಾಣೇಶ್ ಗುಡೂರ್, ಆಡಳಿತ ಮತ್ತು ಶೈಕ್ಷಣಿಕ ಸಲಹೆಗಾರ ಡಾ. ಈ ಎಸ್ ಚಕ್ರವರ್ತಿ, ಪ್ರಾಂಶುಪಾಲರುಗಳಾದ ಡಾ. ಎಂ ಜಿ ಶಿವರಾಮ್, ಡಾ. ಬಿ ಕೆ ನರೇಂದ್ರ, ಡಾ. ಬಿ ರಮೇಶ್, ಡಾ. ಎ ಟಿ ಶಿವರಾಮು, ಡಾ. ಪ್ರಶಾಂತ್ ಕೆ, ಪ್ರೊ. ಎನ್ ರಾಮು, ಪ್ರೊ. ಸಿ ಎಚ್ ಚಂದ್ರಶೇಖರ್, ವಿ ಪುಟ್ಟಸ್ವಾಮಿ, ಟಿ ಎನ್ ಶಿಲ್ಪಾ, ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಇತರರಿದ್ದರು.
