ಉದಯವಾಹಿನಿ, ಕೆ.ಆರ್.ಪೇಟೆ.: ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತೀಯರು ಮಹತ್ತರ ಸಾಧನೆ ಮಾಡುತ್ತಾ ಮುನ್ನುಗಿದ್ದಾರೆ. ಚಂದ್ರಯಾನ-೩ ಭಾರತದ ಪಾಲಿಗೆ ಮೈಲಿಗಲ್ಲಾಗಿದೆ. ಎಂದು ಬಂಡಿಹೊಳೆ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುನೀತ್ ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆಯಲ್ಲಿ ಆಯೋಜಿಸಿದ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಭಾಯಿ, ಮಹಾತ್ಮಗಾಂಧೀಜಿ, ಬಾಲಗಂಗಾಧರ್‌ತಿಲಕ್, ಸುಭಾಷ್ ಚಂದ್ರಬೋಸ್, ಲಾಲಾ ಲಜಪತ್‌ರಾಯ್, ಭಗತ್‌ಸಿಂಗ್ ಸೇರಿದಂತೆ ಅನೇಕ ಮಹಾನ್ ನಾಯಕರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರು.ಅನೇಕರು ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.
ಮಹಾನ್ ನಾಯಕರೂ ಸೇರಿದಂತೆ ತೆರೆಮರೆಯ ಸಾವಿರಾರು ಜನರ ತ್ಯಾಗ-ಬಲಿದಾನದ ಪರಿಣಾಮವಾಗಿ ನಾವಿಂದು ಸ್ವತಂತ್ರರಾಗಿ ಬದುಕುತ್ತಿದ್ದೇವೆ.
ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತೀಯರು ಮಹತ್ತರ ಸಾಧನೆ ಮಾಡುತ್ತಾ ಮುನ್ನುಗಿದ್ದಾರೆ. ಚಂದ್ರಯಾನ-೩ ಭಾರತದ ಪಾಲಿಗೆ ಮೈಲಿಗಲ್ಲಾಗಿದೆ. ಭವಿಷ್ಯದುದ್ದಕ್ಕೂ ನಾವು ಪ್ರತಿಯೊಬ್ಬರ ಸ್ವಾತಂತ್ರ‍್ಯ ಸಮಾನತೆಗೆ ಆದ್ಯತೆ ನೀಡಬೇಕು. ಬ್ರಿಟಿಷರಿಂದ ಸ್ವಾತಂತ್ರ‍್ಯವೇನೋ ಸಿಕ್ಕಿತು, ಆದರೆ ಭಾರತದಲ್ಲಿ ದೌರ್ಜನ್ಯ ಕಿರುಕುಳ ಹಿಂಸಾಚಾರ ಕೋಮುವಾದ ಹಾಗೂ ಅನೇಕ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿದೆ. ಇದನ್ನು ನಿಯಂತ್ರಿಸಲು ನಾವು ಪಣತೊಡಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜಶೇಖರ್, ರಾಮೇಗೌಡ, ಸಮುದಾಯ ಆರೋಗ್ಯಾಧಿಕಾರಿಗಳಾದ ಶಾರದಾಂಬಿಕ, ಪ್ರೀತಿ ಹಾಗೂ ಶುಶ್ರೂಷಕಿ ಸೌಮ್ಯ, ಸಿಬ್ಬಂದಿಗಳಾದ ರಮ್ಯ, ಐಶ್ವರ್ಯ, ರಾಮು, ಕೃಷ್ಣ, ಶೀಲಾ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!