ಉದಯವಾಹಿನಿ, ನವದೆಹಲಿ: ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಯಡಿ ಸತ್ತ ವ್ಯಕ್ತಿಗಳ ಚಿಕಿತ್ಸೆಗೆ ಸುಮಾರು ೬.೯ ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ ಎನ್ನುವ ವಿಷಯ ಲೆಕ್ಕ ಮಹಾಪರಿಶೋಧಕರು- ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ.
ಸತ್ತ ರೋಗಿಗಳಿಗೆ ಚಿಕಿತ್ಸೆಯ ಮೊತ್ತ ಪಾವತಿ ಮಾಡಿರುವ ರಾಜ್ಯಗಳ ಪೈಕಿ ಛತ್ತೀಸ್‌ಘಡ ಮತ್ತು ಹರಿಯಾಣ ಮುಂಚೂಣಿಯಲ್ಲಿವೆ ಎಂದು ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
“ಈ ಹಿಂದೆ ಯೋಜನೆಯ ವಹಿವಾಟು ನಿರ್ವಹಣಾ ವ್ಯವಸ್ಥೆ ನಲ್ಲಿ ರೋಗಿಗಳನ್ನು ‘ಮರಣ’ ಎಂದು ತೋರಿಸಿರುವ ಸಂಗತಿಯನ್ನು ಸಿಎಜಿ ಗಮನಿಸಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದು ಹಣ ಪಾವತಿಯಲ್ಲಿ ಅಕ್ರಮ ನಡೆಸಿರುವುದನ್ನು ಪತ್ತೆ ಮಾಡಿದೆ.
ಈ ಹಿಂದೆ ೩,೪೪೬ ರೋಗಿಗಳ ಚಿಕಿತ್ಸೆಗಾಗಿ ೬.೯೭ ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ದೇಶದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ -ಸಿಎಜಿ ತನ್ನ ವರದಿಯಲ್ಲಿ ಈ ವಿಷಯ ಪ್ರಕಟಿಸಿದೆ.
೨೦೧೮ ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆ ನೀಡಲು ಬಡ ಮತ್ತು ದುರ್ಬಲ ಜನಸಂಖ್ಯೆಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಯಲ್ಲಿ, “ಹಿಂದಿನ ಕ್ಲೈಮ್ ಚಿಕಿತ್ಸೆಯ ಸಮಯದಲ್ಲಿ ’ಮರಣ ಹೊಂದಿದ’ ಎಂದು ತೋರಿಸಲಾದ ಫಲಾನುಭವಿಯ ಚಿಕಿತ್ಸೆ” ಎಂಬ ಶೀರ್ಷಿಕೆಯಡಿಯಲ್ಲಿ ಸರಿ ಸುಮಾರು ೭ ಕೋಟಿ ರೂಪಾಯಿ ವಿಮಾ ಹಣ ಪಾವತಿಸಲಾಗಿದೆ ಎಂದು ಹೇಳಿದೆ.
ಈ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ. ಅಕ್ರಮಗಳನ್ನು ಪತ್ತೆ ಹಚ್ಚುವ ಕೆಲಸ ನಡೆಸಿದೆಎ ಎಂದು ವರದಿಯಲ್ಲಿ ತಿಳಿಸಲಾಗಿದೆ.
