ಉದಯವಾಹಿನಿ, ಬೀಜಿಂಗ್: ಜಾಗತಿಕ ರಿಯಲ್ ಎಸ್ಟೇಟ್ ಹೂಡಿಕೆದಾರರ ಮೇಲೆ ಮತ್ತೊಮ್ಮೆ ಎವರ್‌ಗ್ರ್ಯಾಂಡೆ ಹೊಡೆತ ಬಿದ್ದಿದೆ. ಚೀನಾದ ರಿಯಲ್ ಎಸ್ಟೇಟ್‌ನ ಆರ್ಥಿಕತೆ ನಿಧಾನವಾಗಿ ಕುಸಿಯುತ್ತಿರುವ ಅವಧಿಯಲ್ಲಿ ಚೀನಾ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ ಎವರ್‌ಗ್ರ್ಯಾಂಡೆ ಇದೀಗ ಅಮೆರಿಕಾದಲ್ಲಿ ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದೆ. ಸಹಜವಾಗಿಯೇ ಇದರಿಂದ ಚೀನಾದಲ್ಲಿ ಭೂಮಿ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಲದೆ ಜಾಗತಿಕ ಹೂಡಿಕೆದಾರರಲ್ಲಿ ನಡುಕ ಮೂಡುವಂತಾಗಿದೆ.
ಎವರ್‌ಗ್ರ್ಯಾಂಡೆ ಸಂಸ್ಥೆ ಸದ್ಯ ಸುಮಾರು ಬರೊಬ್ಬರಿ ೩೦೦ ಶತಕೋಟಿ ಡಾಲರ್ ಸಾಲವನ್ನು ಹೊಂದಿದ್ದು, ಈ ಮೂಲಕ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸಾಲ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅದೂ ಅಲ್ಲದೆ ಭಾರೀ ಸಾಲ ಹೊಂದಿದ್ದ ಎವರ್‌ಗ್ರ್ಯಾಂಡೆ ೨೦೨೧ರಲ್ಲೇ ಡಿಫಾಲ್ಟ್ ಘೋಷಿಸಿತ್ತು. ಇದರ ಪರಿಣಾಮ ಜಾಗತಿಕ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದಿದ್ದು, ಷೇರು ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿತ್ತು. ಆ ಅವಧಿಯಲ್ಲಿ ವಿಶ್ವದ ಬಹುತೇಕ ದೇಶಗಳ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದು, ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ನಷ್ಟ ಹೊಂದಿದ್ದರು.
