
ಉದಯವಾಹಿನಿ, ಔರಾದ್ :ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಸೇವೆ ಮತ್ತು ಸೌಲಭ್ಯ ಒದಗಿಸುತ್ತಿದ್ದು, ರಾಜ್ಯದ ಇತರೇ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಇನ್‍ಸ್ಪೆಕ್ಟರ್ ಪ್ರದೀಪ ಕೊಳ್ಳಾ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತರು, ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಅವರಿಂದ ಮಾಹಿತಿ ಪಡೆದರು. ಆಸ್ಪತ್ರೆಯ ವಾರ್ಡ್‌ಗಳು, ತುರ್ತುಚಿಕಿತ್ಸಾ ಘಟಕ, ಔಷಧಿ ವಿತರಣೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದ ಅವರು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳನ್ನು ಮಾತನಾಡಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡಿರುವ ಬಗ್ಗೆ ಶ್ಲಾಘಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆವರಣದಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತ ಪ್ರದೇಶ, ಅರಣ್ಯೀಕರಣ, ಹಸಿರು ವಾತಾವರಣ ಸೃಷ್ಟಿ ಸೇರಿದಂತೆ ರೋಗಿಗಳೊಂದಿಗೆ ಉತ್ತಮ ಬಾಂಧವ್ಯಗಳನ್ನು ಆಸ್ಪತ್ರೆ ಹೊಂದಿದೆ ಎಂದು ಡಾ. ಗಾಯತ್ರಿ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಪ್ರಥಮ ಚಿಕಿತ್ಸೆ ಕೇಂದ್ರವಾಗಿ ಅಪಘಾತ ಇತರೆ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯೂ ಇಂದು ವಿಶಾಲವಾದ ಕೊಠಡಿ, ಸ್ವಚ್ಛತೆಯ ಆವರಣ. ಆವರಣದ ತುಂಬ ಹಸಿರು ಗಿಡಗಳು, ರಸ್ತೆ, ಕುಡಿಯುವ ನೀರು, ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಲೋಕಾಯುಕ್ತ ಆಧಿಕಾರಿಗಳಿಗೆ ಮಾಹಿತಿ ನೀಡಿದ್ದರು.ಆಸ್ಪತ್ರೆಯಲ್ಲಿ ಹೆರಿಗೆ, ಅಪಘಾತಗಳಿಗೆ ವೈದ್ಯಕೀಯ ಚಿಕಿತ್ಸೆ, ಪ್ರತಿ ಸೋಮವಾರ ಮತ್ತು ಶುಕ್ರವಾರ ಗೃಹಿಣಿಯರಿಗೆ ಶಸ್ತ್ರ ಚಿಕಿತ್ಸೆ, ರಾತ್ರಿ ವೇಳೆಯೂ ಚಿಕಿತ್ಸೆ ನೀಡಲಾಗುತ್ತಿದೆ.
ಹಿಂದೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ರೋಗಿಗಳು ಹಿಂಜರಿಯುತ್ತಿದ್ದರು. ಇಂದು ಆಸ್ಪತ್ರೆ ಸುಸಜ್ಜಿತವಾಗಿ ನಿರ್ಮಾಣಗೊಂಡು 24 ಗಂಟೆಗಳ ಕಾಲ ಸೇವೆ ದೊರುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ 70ಕ್ಕೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ ಎಂದು ಗ್ರಾಮದ ಮುಖಂಡರು ಮಾಹಿತಿ ನೀಡಿದ್ದರು. ಈ ವೇಳೆ ಲೋಕಾಯುಕ್ತ ಪೇದೆ ಶುಕ್ಲೋಧನ್, ಹಾತಿಸಿಂಗ್, ಡಾ. ಶಿವಕುಮಾರ, ಡಾ. ಪ್ರೀಯಂಕಾ, ಡಾ. ರಾಹುಲ್, ಸಿಬ್ಬಂದಿಗಳಾದ ಮರೀಯಮ್ಮ, ರೇಣುಕಾ ಸಿಬ್ಬಂದಿಗಳು ಇದ್ದರು.
3 ಸಾವಿರಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ:
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಲ್ಲಿಯವರೆಗೆ 3000ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ ನಡೆದಿದೆ. ಮಹಿಳೆಯರು ಹೆರಿಗೆ ನಂತರ ಮಕ್ಕಳು ಮುಂದೆ ಆಗದಂತೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಇವರಿಗೆ ಪ್ರತಿ ಸೋಮವಾರ ಅಥವಾ ಶುಕ್ರವಾರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಡಾ. ಗಾಯತ್ರಿ ತಿಳಿಸಿದರು.
