
ಉದಯವಾಹಿನಿ, ಶಿಡ್ಲಘಟ್ಟ: ತಂದೆ ತಾಯಿ ಹಾಗೂ ಗುರುಗಳನ್ನು ಯಾರು ಗೌರವಿಸುತ್ತಾರೋ ಅವರು ಜೀವನದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸುತ್ತಾರೆ ಎಂದು ಶಾಸಕ ಬಿಎನ್ ರವಿಕುಮಾರ್ ಹೇಳಿದರು. ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಪೋಶನ್ ಶಕ್ತಿ ಯೋಜನೆಯಡಿ 9ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಮಗು ತಾಯಿ ತಂದೆಯಷ್ಟೇ ಶಿಕ್ಷಣ ಕಲಿಸಿದ ಗುರುವನ್ನು ಗೌರವಿಸಬೇಕು ಈ ಮೂವರು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಪಾತ್ರವಹಿಸುತ್ತಾರೆ ಎಂದರು. ಮುಂಬರುವ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲು ಕ್ರಮವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಹಿಂದೆ ಪ್ರಧಾನ ಮಂತ್ರಿ ಪೋಷ ಶಕ್ತಿ ಯೋಜನೆ ಅಡಿ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ಬಾಳೆಹಣ್ಣು ಹಾಗೂ ಚಿಕ್ಕಿ ನೀಡುತ್ತಿದ್ದರು. ಹಲವು ಕಡೆ ಪ್ರೌಢಶಾಲೆ ಅಂದರೆ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ ಇರುತ್ತಿತ್ತು ಅಂತಹ ಸಂದರ್ಭದಲ್ಲಿ 8ನೇ ತರಗತಿಯ ಮಕ್ಕಳಿಗೆ ಮಾತ್ರ ಚಿಕ್ಕಿ ನೀಡುತ್ತಿದ್ದರೆ ಇನ್ನಿತರೆ ಒಂಬತ್ತು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿರಲಿಲ್ಲ. ಇದರಿಂದ ಮಕ್ಕಳಲ್ಲಿ ತಾರತಮ್ಯ ಉಂಟಾಗುತ್ತಿತ್ತು. ಆದರೆ ಇದೀಗ ಎಲ್ಲರಿಗೂ ಸಿಗುವುದರಿಂದ ತಾರತಮ್ಯ ಹೋಗಲಾಡಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ ನರೇಂದ್ರ ಕುಮಾರ್, ತಾದೂರು ರಘು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್ ಸುಬ್ಬಾರೆಡ್ಡಿ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
