
ಉದಯವಾಹಿನಿ ದೇವನಹಳ್ಳಿ: ಕೊಯಿರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ದೇಶಕರ ಸ್ಥಾನದ ಚುನಾವಣೆಯು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಹ ವಿಫಲವಾಗಿ ಎಂಪಿಸಿಎಸ್ ಬಿಜೆಪಿ ಮಡಿಲಿಗೆ ಸೇರಿದೆ. ದೇವನಹಳ್ಳಿ ತಾಲೂಕಿನ ಕೊಯಿರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರುಗಳ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ವಿಜೇತರಾಗಿದ್ದು, ಕಾಂಗ್ರೆಸ್ ಬೆಂಬಲಿತ 2 ಅಭ್ಯರ್ಥಿಗಳು ಹಾಗೂ ಒಂದು ಅವಿರೋಧ ಆಯ್ಕೆಯಾಗಿರುತ್ತದೆ. ಬಿಜೆಪಿ ಬೆಂಬಲಿತ ವಿಜೇತ ಅಭ್ಯರ್ಥಿಗಳಾದ ವೆಂಕಟೇಶ್, ಕೃಷ್ಣಮೂರ್ತಿ, ನಾಗರಾಜ್, ಕೃಷ್ಣಮೂರ್ತಿ, ನಾಗವೇಣಮ್ಮ, ಭಾಗ್ಯಮ್ಮ, ಆನಂದ್, ರಾಜಣ್ಣ, ಕಾಂಗ್ರೆಸ್-ಜೆಡಿಎಸ್‌ನಿಂದ ರಾಮಾಂಜಿನಪ್ಪ ಮತ್ತು ನಾರಾಯಣಸ್ವಾಮಿ ಆಯ್ಕೆಯಾಗಿದ್ದು, ಜೆಡಿಎಸ್ ಬೆಂಬಲಿತ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲಾಟರಿಯಲ್ಲಿ ಒಂದು ಸ್ಥಾನವನ್ನು ಎಲೆ ವೆಂಕಟೇಶ್ ಗಳಿಸಿದರು. ಈ ಚುನಾವಣೆಯು ಕೊಯಿರ ಕ್ಷೇತ್ರದಲ್ಲಿ ಮುಖಂಡರಲ್ಲಿ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಬಿಜೆಪಿ ಅಭ್ಯರ್ಥಿಗಳು ಸೋಲುತ್ತಾರೆಂಬ ಭಾವನೆಯಲ್ಲಿದ್ದವರಿಗೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಂಭ್ರಮವನ್ನು ಮುಖಂಡರು ಮತ್ತು ಬೆಂಬಲಿತ ಸದಸ್ಯರು ಪಟಾಕಿ ಹಚ್ಚಿ ಸಂಭ್ರಮಿಸಿದರು.
ಎಂಪಿಸಿಎಸ್ ಮಾಜಿ ಅಧ್ಯಕ್ಷ ಕೆ.ಎನ್.ರಮೇಶ್‌ಬಾಬು ಮಾತನಾಡಿ, 5 ವರ್ಷದ ಎಂಪಿಸಿಎಸ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 10ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 10ರಲ್ಲಿ ಸಾಮಾನ್ಯ ಮೀಸಲು ಕ್ಷೇತ್ರದಿಂದ 6ರಲ್ಲಿ 5 ಸ್ಥಾನ ಗೆದ್ದಿದ್ದು, ಬಿಸಿಎಂ-ಬಿ ಮೀಸಲು ಕ್ಷೇತ್ರದಲ್ಲಿ 1, ಮಹಿಳಾ ಮೀಸಲು ಕ್ಷೇತ್ರದಿಂದ 2 ಸ್ಪರ್ಧಿಸಿ ಜಯಶೀಲರಾಗಿರುತ್ತಾರೆ. ಹಾಗಾಗೀ ಬಿಜೆಪಿ ಬೆಂಬಲಿತ 8 ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ಎಂಪಿಸಿಎಸ್‌ನಲ್ಲಿ ಹಾಲು ಪೂರೈಸುವ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ, ಎಂಪಿಸಿಎಸ್‌ಗೆ ಚುನಾವಣೆ ಬೇಡ, ಅವಿರೋಧ ಮಾಡಿಕೊಳ್ಳೋಣವೆಂದು ಮಾತುಕತೆ ಮಾಡಲಾಗಿತ್ತು. ಮೂರು ಪಕ್ಷದವರೂ ಅರ್ಜಿಯನ್ನು ಹಾಕಿದ್ದರು. ಇದುವರೆಗೆ ದಳ ಮತ್ತು ಬಿಜೆಪಿ ಮೈತ್ರಿಯಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರೂ ಸಹ ಬಿಜೆಪಿ ಹೆಚ್ಚು ನಿರ್ದೇಶಕರ ಆಯ್ಕೆಯಾಗಿರುವುದು ಸಂತಸವನ್ನು ತಂದಿದೆ ಎಂದರು.ಈ ವೇಳೆ ಕೃಷಿಕ ಸಮಾಜದ ನಿರ್ದೇಶಕ ರವಿಕುಮಾರ್.ಎಚ್.ಎಂ. ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಪುನಿತಾ, ಗ್ರಾಪಂ ಸದಸ್ಯರಾದ ನಯನ, ಮುನೀಂದ್ರ, ಬಿಜೆಪಿ ಬೆಂಬಲಿತ ಸದಸ್ಯರು, ಕಾರ್ಯಕರ್ತರು ಇದ್ದರು.
