
ಉದಯವಾಹಿನಿ ಪಾವಗಡ: ‘ಪ್ರಸ್ತುತ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವ, ಆದರ್ಶಗಳನ್ನು ಮನೆ-ಮನೆಗಳಿಗೆ ತಲುಪಿಸುವ ಅಗತ್ಯ ಇದೆ ಎಂದು ಆರ್ಯ ಈಡಿಗ ಸಂಘದ ಗೌರವಾಧ್ಯಕ್ಷ ರಾಮಪ್ಪ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಗುರುವಾರ ಆರ್ಯ ಈಡಿಗರ ಸಂಘ (ರಿ) ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ 169 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಮತ್ತು ಚಿಂತನೆಗಳನ್ನು ತಿಳಿದುಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.ಆರ್ಯ ಈಡಿಗ ಸಂಘದ ತಾಲ್ಲೂಕು ಅಧ್ಯಕ್ಷ ವೀರಾಂಜನೇಯ ಮಾತನಾಡಿ, ನಾರಾಯಣ ಗುರುಗಳು ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ದಲಿತರು, ಹಿಂದುಳಿದ ವರ್ಗಗಳ ಸಮುದಾಯವನ್ನು ಉನ್ನತಮಟ್ಟಕ್ಕೆ ಏರಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಆದರೆ ಇದುವರೆಗೂ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದೆ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸೆ.9 ರಂದು ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಗಮ ಮಂಡಳಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುಲಭಾಂದವರು ಭಾಗವಹಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ರಾಮಾಂಜಿನೇಯಲು, ಕೆ.ಎಸ್.ಜೆ.ಯು ತಾಲ್ಲೂಕು ಅಧ್ಯಕ್ಷ ಎಸ್.ಮೈಕೆಲ್ ನಾಡಾರ್, ವೇಣು, ಸೋಮಶೇಖರ್, ಅಂಜಿ ಬಾಬು, ಗಂಗಾಧರ್, ಸುಕುಮಾರ್, ಗ್ರೇಡ್-2 ತಹಶೀಲ್ದಾರ್ ಎನ್.ಮೂರ್ತಿ, ಎಡಿಎಲ್ಆರ್ ರುದ್ರೇಶ್, ಆಹಾರ ಶಿರಸ್ತೇದಾರ ಕೃಷ್ಣಮೂರ್ತಿ, ಕಂದಾಯ ನಿರೀಕ್ಷಕ ರಾಜ್ ಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ರಾಜೇಶ್, ರವಿ ಇದ್ದರು.
